ಬೆಂಗಳೂರು: 2023ರಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಹಣಕಾಸಿನ ಮೇಲೆ ಭಾರೀ ಒತ್ತಡ ಉಂಟುಮಾಡಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಪರಿಣಾಮವಾಗಿ ಆರ್ಥಿಕ ಕೊರತೆ ಹೆಚ್ಚಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಾದ ಅನುದಾನಗಳ ಮೇಲೂ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲಕ್ಕೆ ಅವಲಂಬಿತವಾಗುತ್ತಿದ್ದು, ಸಾಲದ ಅಸಲು ಮರುಪಾವತಿಗೆ ಆದ್ಯತೆ ನೀಡುತ್ತಿದ್ದರೂ ವಾರ್ಷಿಕ ಮರುಪಾವತಿ ಪ್ರಮಾಣ ತೃಪ್ತಿಕರ ಮಟ್ಟದಲ್ಲಿ ಇಲ್ಲ ಎನ್ನಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ದತ್ತಾಂಶದ ಪ್ರಕಾರ, ಕರ್ನಾಟಕ ಸರ್ಕಾರ ಜನವರಿ–ಮಾರ್ಚ್ ಅವಧಿಯಲ್ಲಿ ಮುಕ್ತ ಮಾರುಕಟ್ಟೆಯಿಂದ ಸುಮಾರು ₹93,000 ಕೋಟಿ ಸಾಲ ಪಡೆಯುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ದೇಶದ ಇತರೆ ರಾಜ್ಯಗಳಿಗಿಂತಲೂ ಇದು ಅತಿ ಹೆಚ್ಚಿನ ಮೊತ್ತವಾಗಿದ್ದು, ಪ್ರತಿ ತಿಂಗಳು ಸರಾಸರಿ ₹31,000 ಕೋಟಿ ಸಾಲ ಪಡೆಯುವ ಸಾಧ್ಯತೆ ಇದೆ.
ಇದನ್ನು ಓದಿ : https://karnatakastories.in/?p=5230
ಕ್ರೆಡಿಟ್ ರೇಟಿಂಗ್ ಸಂಸ್ಥೆ ಐಸಿಆರ್‌ಎ ಮಾಹಿತಿ ನೀಡಿರುವಂತೆ, ಡಿಸೆಂಬರ್ ಅಂತ್ಯದವರೆಗೆ ರಾಜ್ಯವು ಈಗಾಗಲೇ ಸುಮಾರು ₹12,000 ಕೋಟಿ ಸಾಲ ಸಂಗ್ರಹಿಸಿದೆ. ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಕಲ್ಯಾಣ ಆಧಾರಿತ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವ ಹೊರೆ, ರಾಜ್ಯದ ಒಟ್ಟು ಸಾಲ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಎನ್ನಲಾಗಿದೆ.
2022–23ರಲ್ಲಿ ₹44,549 ಕೋಟಿ ಇದ್ದ ಸಾಲ ಪ್ರಮಾಣವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ₹1.16 ಲಕ್ಷ ಕೋಟಿಗೆ ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಗ್ರಹಿಸಿದ ಸಾಲವನ್ನು ಹಳೆಯ ಸಾಲಗಳ ಮರುಪಾವತಿ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುತ್ತದೆ ಎಂದು ಹೇಳಲಾಗಿದೆ.
ಆರ್‌ಬಿಐ ವರದಿ ಪ್ರಕಾರ, ದೇಶದ ರಾಜ್ಯಗಳು ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ₹4.99 ಲಕ್ಷ ಕೋಟಿ ಸಾಲ ಪಡೆಯಲು ಯೋಜಿಸಿದ್ದು, ಇದರಲ್ಲಿ ಕರ್ನಾಟಕದ ಪಾಲು ಸುಮಾರು 19 ಶೇಕಡಾ. ಆದರೆ ಒಂದು ತ್ರೈಮಾಸಿಕದ ಅಂಕಿಅಂಶಗಳ ಆಧಾರದ ಮೇಲೆ ರಾಜ್ಯದ ಹಣಕಾಸಿನ ಸ್ಥಿತಿಯನ್ನು ಅಳೆಯುವುದು ಸರಿಯಲ್ಲ ಎಂದು ಹಣಕಾಸು ಇಲಾಖೆಯ ಮಾಜಿ ಮುಖ್ಯಸ್ಥ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅಥೀಕ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಲ್ಲಿ ಮೊದಲ ಮೂರು ತ್ರೈಮಾಸಿಕಗಳಲ್ಲಿ ನಗದು ಹರಿವು ಉತ್ತಮವಾಗಿರುವುದರಿಂದ, ವರ್ಷಾಂತ್ಯದ ನಾಲ್ಕನೇ ತ್ರೈಮಾಸಿಕದಲ್ಲಿ ಹೆಚ್ಚಿನ ಪ್ರಮಾಣದ ಸಾಲವನ್ನು ಪಡೆಯಲಾಗುತ್ತದೆ. ಇತರ ರಾಜ್ಯಗಳು ವರ್ಷವಿಡೀ ಹಂತ ಹಂತವಾಗಿ ಸಾಲ ಪಡೆಯುವುದರಿಂದ ಅವರ ಸಾಲ ವಿತರಣೆ ಸಮವಾಗಿ ನಡೆಯುತ್ತದೆ ಎಂದು ಅವರು ವಿವರಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಯೋಜಿಸಿರುವ ₹1.16 ಲಕ್ಷ ಕೋಟಿ ಸಾಲದಲ್ಲಿ ಸುಮಾರು ₹1.05 ಲಕ್ಷ ಕೋಟಿ ಮುಕ್ತ ಮಾರುಕಟ್ಟೆಯಿಂದ ಹಾಗೂ ಉಳಿದ ಮೊತ್ತವನ್ನು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳಿಂದ ಸಂಗ್ರಹಿಸಲಾಗುತ್ತದೆ. ಮೊದಲ ಎರಡು ತ್ರೈಮಾಸಿಕಗಳಲ್ಲಿ ಯೋಜನೆಗಳಿಗೆ ಅನುಮೋದನೆ ಹಾಗೂ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಮೂರನೇ ತ್ರೈಮಾಸಿಕದಲ್ಲಿ ಕಾಮಗಾರಿಗಳು ಆರಂಭವಾಗುತ್ತವೆ. ನಾಲ್ಕನೇ ತ್ರೈಮಾಸಿಕದಲ್ಲಿ ವೆಚ್ಚದ ಒತ್ತಡ ಕಡಿಮೆ ಮಾಡಲು ಹಣಕಾಸು ಇಲಾಖೆ ಪ್ರಯತ್ನ ನಡೆಸಿದ್ದು, ಕೆಲ ಮಟ್ಟಿಗೆ ಯಶಸ್ಸು ಕಂಡಿದೆ ಎಂದು ಅಥೀಕ್ ತಿಳಿಸಿದ್ದಾರೆ.






