ವೈದ್ಯಕೀಯ ಕ್ಷೇತ್ರವನ್ನು ಅಚ್ಚರಿಗೊಳಿಸುವ ಘಟನೆಗಳು ಇನ್ನೂ ಜಗತ್ತಿನ ಬೇರೆಬೇರೆ ಭಾಗಗಳಿಂದ ಹೊರಬರುತ್ತಲೇ ಇವೆ. ಕೊಲಂಬಿಯಾದಲ್ಲಿ ನಡೆದ ಈ ಘಟನೆ ವೈದ್ಯರನ್ನೇ ದಿಗ್ಭ್ರಮೆಗೆ ಒಳಪಡಿಸಿದೆ. 82 ವರ್ಷದ ವೃದ್ಧ ಮಹಿಳೆಗೆ ಏಕಾಏಕಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಮೊದಲಿಗೆ ಕುಟುಂಬದವರು ಇದನ್ನು ಸಾಮಾನ್ಯ ಗ್ಯಾಸ್ಟ್ರಿಕ್ ಸಮಸ್ಯೆ ಎಂದುಕೊಂಡಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ದ ಬಳಿಕ ನಡೆದ ಪರೀಕ್ಷೆಗಳು ಎಲ್ಲರಿಗೂ ಆಘಾತ ತಂದವು.
ಇದನ್ನು ಓದಿ: ಚಿಕ್ಕಬಳ್ಳಾಪುರ: ಅಣ್ಣ–ತಂಗಿಯ ಪವಿತ್ರ ಸಂಬಂಧಕ್ಕೆ ಧಕ್ಕೆ: ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದ 21 ವರ್ಷದ ಯುವತಿ ನೇಣಿಗೆ ಶರಣು
ನೋವು ತೀವ್ರವಾಗುತ್ತಿದ್ದಂತೆ ಮಹಿಳೆಯನ್ನು ಬೊಗೋಟಾದ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಪರೀಕ್ಷೆಯಲ್ಲಿ ವೈದ್ಯರು ಹೊಟ್ಟೆಯೊಳಗಿನ ಗೆಡ್ಡೆಯ ಶಂಕೆ ವ್ಯಕ್ತಪಡಿಸಿದರು. ನಂತರ CT ಸ್ಕ್ಯಾನ್ ಹಾಗೂ ಎಕ್ಸ್-ರೇ ಪರೀಕ್ಷೆ ನಡೆಸಿದಾಗ, ಅಲ್ಲಿ ಗೆಡ್ಡೆಯ ಬದಲು ಸಂಪೂರ್ಣವಾಗಿ ಕ್ಯಾಲ್ಸಿಫೈಡ್ ಆಗಿರುವ ಭ್ರೂಣವೊಂದು ಪತ್ತೆಯಾಯಿತು. ಇದು ಸುಮಾರು 40 ವರ್ಷ ಹಳೆಯದಾದ ಭ್ರೂಣವಾಗಿದ್ದು, ಕಲ್ಲಿನಂತೆ ಗಟ್ಟಿಯಾಗಿತ್ತು. ವೈದ್ಯಕೀಯ ಭಾಷೆಯಲ್ಲಿ ಇದನ್ನು “ಲಿಥೋಪೀಡಿಯನ್” ಅಥವಾ “ಕಲ್ಲಿನ ಮಗು” ಎಂದು ಕರೆಯಲಾಗುತ್ತದೆ.
ವೈದ್ಯರ ವಿವರಣೆ ಪ್ರಕಾರ, ಗರ್ಭಧಾರಣೆ ಗರ್ಭಾಶಯದ ಹೊರಗೆ, ಅಂದರೆ ಹೊಟ್ಟೆಯೊಳಗೆ ಸಂಭವಿಸಿದಾಗ ಈ ರೀತಿಯ ಅಪರೂಪದ ಸ್ಥಿತಿ ಉಂಟಾಗುತ್ತದೆ. ಇಂತಹ ಗರ್ಭಧಾರಣೆಯಲ್ಲಿ ಭ್ರೂಣವು ಬೆಳೆಯಲು ಸಾಧ್ಯವಿಲ್ಲ. ದೇಹವು ಅದನ್ನು ಹೊರಹಾಕಲು ಅಸಮರ್ಥವಾಗಿದ್ದರೆ, ಸೋಂಕು ತಪ್ಪಿಸಲು ಸ್ವತಃ ಕ್ಯಾಲ್ಸಿಯಂ ಲೇಪನವನ್ನು ಭ್ರೂಣದ ಸುತ್ತ ರೂಪಿಸುತ್ತದೆ. ವರ್ಷಗಳ ಕಾಲ ಯಾವುದೇ ಲಕ್ಷಣವಿಲ್ಲದೇ ಅದು ದೇಹದೊಳಗೇ ಉಳಿದುಕೊಂಡು, ನಿಧಾನವಾಗಿ ಕಲ್ಲಿನಂತೆ ಗಟ್ಟಿಯಾಗುತ್ತದೆ.
ಈ ಪ್ರಕರಣದಲ್ಲಿ ಮಹಿಳೆಗೆ ಗರ್ಭಧಾರಣೆ ನಡೆದಿರುವುದು ಸುಮಾರು ನಾಲ್ಕು ದಶಕಗಳ ಹಿಂದಿನದ್ದಾಗಿದ್ದು, ಆಕೆಗೆ ಅದೇ ತಿಳಿದಿರಲಿಲ್ಲ. ಪತ್ತೆಯಾದ ಭ್ರೂಣದ ತೂಕ ಸುಮಾರು ನಾಲ್ಕು ಪೌಂಡ್ ಆಗಿದ್ದು, ಸಂಪೂರ್ಣವಾಗಿ ಕ್ಯಾಲ್ಸಿಫೈಡ್ ಆಗಿತ್ತು. ಹೊಟ್ಟೆ ನೋವು ಹೊರತುಪಡಿಸಿ ಮಹಿಳೆಗೆ ಇತರ ಗಂಭೀರ ಸಮಸ್ಯೆಗಳು ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಎಬಿಸಿ ನ್ಯೂಸ್, ಸಿಬಿಎಸ್ ನ್ಯೂಸ್ ಮತ್ತು ಮೆಡಿಕಲ್ ಡೈಲಿ ವರದಿಗಳ ಪ್ರಕಾರ, ಇಂತಹ ಲಿಥೋಪೀಡಿಯನ್ ಪ್ರಕರಣಗಳು ವಿಶ್ವದಾದ್ಯಂತ 300ಕ್ಕೂ ಕಡಿಮೆ ಬಾರಿ ಮಾತ್ರ ದಾಖಲಾಗಿವೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಬೇರೆ ಕಾರಣಕ್ಕಾಗಿ ವೈದ್ಯಕೀಯ ತಪಾಸಣೆ ನಡೆಸಿದಾಗ ಇಂತಹ ಅಪರೂಪದ ಸ್ಥಿತಿಗಳು ಬೆಳಕಿಗೆ ಬರುತ್ತವೆ. ಇಷ್ಟೊಂದು ವರ್ಷಗಳ ಕಾಲ ಭ್ರೂಣವು ದೇಹದೊಳಗೆ ಅಡಗಿರುವುದು ಈ ಪ್ರಕರಣವನ್ನು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸಮಾಡಿದೆ.






