ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಸಂಬಂಧಿಸಿದ ಎರಡು ಪ್ರಮುಖ ಅರ್ಜಿಗಳ ವಿಚಾರಣೆ ಇಂದು ಕೋರ್ಟ್‌ನಲ್ಲಿ ನಡೆಯುತ್ತಿದ್ದು, ತೀರ್ಮಾನ ಹೊರಬರುವ ಸಾಧ್ಯತೆ ಇದೆ. ದರ್ಶನ್ ಅವರನ್ನು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಲಾಗಿದೆ ಮತ್ತು ನಟ ದರ್ಶನ್ ಪರ ವಕೀಲರು ಹಾಸಿಗೆ ದಿಂಬು ನೀಡುವಂತೆ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ಬಳ್ಳಾರಿ ಜಿಲ್ಲೆಗೆ ಶಿಫ್ಟ್ ಮಾಡುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯಲಿದೆ. ಹಾಸಿಗೆ ದಿಂಬು ಕೋರಿ ಮತ್ತೊಂದು ಅರ್ಜಿಯೂ ದಾಖಲಾಗಿದ್ದು, ದರ್ಶನ್, ಜಗದೀಶ್, ಲಕ್ಷ್ಮಣ್, ನಾಗರಾಜ್, ಪ್ರದೋಷ್ ಆರೋಪಿಗಳ ಶಿಫ್ಟ್ ಕುರಿತಂತೆ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿದೆ. ಆರೋಪಿಗಳ ಪರ ವಕೀಲರು ಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಲಿದ್ದಾರೆ. ನ್ಯಾಯಾಲಯ ಇಂದು ವಿಚಾರಣೆ ನಡೆಸಿ ತೀರ್ಮಾನ ನೀಡಲಿದೆ.
ಕಳೆದ ಬಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ನಂತರ ದರ್ಶನ್‌ರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು.
ಬಳ್ಳಾರಿ ಜೈಲಿಗೆ ಸ್ಥಳಾಂತರದ ನಿರ್ಧಾರ ಕುರಿತು 48ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಈ ವೇಳೆ ದರ್ಶನ್ ಪರ ವಕೀಲ ಸಂದೇಶ್ ಚೌಟ ಸುಪ್ರೀಂ ಕೋರ್ಟ್ ನೀಡಿದ ತ್ವರಿತ ವಿಚಾರಣೆ ಆದೇಶವನ್ನು ಆಧರಿಸಿ, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ದರ್ಶನ್ ಅವರ ವಕೀಲ ಸಂದೇಶ್ ಚೌಟ ಅವರು ಕೋರ್ಟ್‌ಗೆ ನೀಡಿದ ವಾದದಲ್ಲಿ, ಈ ಪ್ರಕರಣದಲ್ಲಿ 272 ಸಾಕ್ಷಿಗಳಿದ್ದಾರೆ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಈಗಾಗಲೇ ತ್ವರಿತ ವಿಚಾರಣೆಗೆ ಸೂಚನೆ ನೀಡಿದೆ. ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವುದು ಸೂಕ್ತವಲ್ಲ ಎಂದು ಅವರು ವಾದಿಸಿದ್ದಾರೆ. “ದರ್ಶನ್ ಅವರಿಗೆ ತಮ್ಮ ವಕೀಲರೊಂದಿಗೆ ಮಾತಾಡಲು ಅಗತ್ಯವಿದೆ. ತ್ವರಿತ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುವುದು ಸಾಧ್ಯವಿಲ್ಲ. ಬೆಂಗಳೂರಿನಿಂದ ಬಳ್ಳಾರಿ 310 ಕಿಮೀ ದೂರವಿದ್ದು, ಪ್ರತಿದಿನ ವಿಚಾರಣೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ಬರುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬಾರದು” ಎಂದು ಚೌಟ ಅವರು ಹೇಳಿದ್ದಾರೆ.
ಇದರ ಜೊತೆಗೆ, ದರ್ಶನ್ ತಾಯಿಯ ಅನಾರೋಗ್ಯ ಮತ್ತು ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿರುವುದನ್ನು ಸೂಚಿಸಿ, ಅವರನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸುವುದು ಸೂಕ್ತವಲ್ಲ ಎಂದು ಅವರ ಪರವಾಗಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಜೈಲುದಲ್ಲಿ ಬೆಡ್, ಬೆಡ್‌ಶೀಟ್ ಮತ್ತು ಇತರ ಅಗತ್ಯ ಮೂಲಭೂತ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲಾಗಿದೆ.
ಇನ್ನು, ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಆಡಳಿತಾತ್ಮಕ ಹಾಗೂ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ, ದರ್ಶನ್ ಸೇರಿದಂತೆ ಐವರು ಆರೋಪಿಗಳನ್ನು ಬೇರೆ ಜೈಲುಗಳಿಗೆ ವರ್ಗಾಯಿಸುವಂತೆ ಕೇಳಿದ್ದಾರೆ. ಅವರು ವಾದಿಸುತ್ತಾರೆ, ‘ದರ್ಶನ್ ಸಾಮಾನ್ಯ ವಿಚಾರಣಾಧೀನ ಖೈದಿ ಅಲ್ಲ; ಅವರು ಸೆಲೆಬ್ರಿಟಿ ಸ್ಥಾನದಲ್ಲಿದ್ದಾರೆ. ಸೆಲೆಬ್ರಿಟಿಗಳು ಸಮಾಜದಲ್ಲಿ ಮಾದರಿ ರೂಪದಲ್ಲಿ ಕಾಣಿಸಿಕೊಂಡಿರುತ್ತಾರೆ. ಆದರೆ ಕೊಲೆ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ತಪ್ಪಿತಸ್ಥರಾಗಿರುವ ವ್ಯಕ್ತಿಗಳು ಸಾಕ್ಷ್ಯಗಳಿಗೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.’ ಜೈಲು ಮ್ಯಾನ್ಯುಯಲ್‌ನಲ್ಲಿ ಆಡಳಿತಾತ್ಮಕ ಕಾರಣಗಳಿಗಾಗಿ ಸ್ಥಳಾಂತರ ಮಾಡಲು ಅವಕಾಶವಿದೆ ಎಂದು ಸಹ ತಿಳಿಸಿದ್ದಾರೆ.
ಎಸ್‌ಪಿಪಿ ಪ್ರಸನ್ನ ಕುಮಾರ್, ದರ್ಶನ್‌ನ ತಾಯಿಯ ಅನಾರೋಗ್ಯದ ಕಾರಣಕ್ಕೆ ಸಂಬಂಧಿಸಿದಂತೆ, ವಿಡಿಯೋ ಕಾನ್ಫರೆನ್ಸ್ ಮೂಲಕ ವಕೀಲರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಸುಪ್ರೀಂ ಕೋರ್ಟ್‌ನ ಜಾಮೀನು ರದ್ದತಿ ಆದೇಶದಲ್ಲಿ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಾಗಿತ್ತು ಎಂಬ ವಿಷಯವನ್ನು ಗಮನಿಸಲಾಗಿದೆ ಎಂದು ತಿಳಿಸಿದ್ದಾರೆ.






