---Advertisement---

ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೊನೆಯ 20 ನಿಮಿಷಗಳ ವಿವರ ಬಹಿರಂಗ, ಏನಾಯಿತು ಗೊತ್ತಾ?

On: January 31, 2026 8:44 AM
Follow Us:
---Advertisement---

ಉದ್ಯಮಿ ಸಿ.ಜೆ. ರಾಯ್ ಅವರ ಮರಣ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಕಾನ್‌ಫಿಡೆಂಟ್ ಗ್ರೂಪ್‌ನ ಮ್ಯಾನೇಜರ್ ಟಿ.ಎ. ಜೋಸೆಫ್ ಬಿನ್ ಟಿ.ಜೆ. ಅಲೆಕ್ಸಾಂಡರ್ ಅವರು ಈ ಸಂಬಂಧ ದೂರು ಸಲ್ಲಿಸಿದ್ದು, ಘಟನೆಯ ಮುನ್ನ ನಡೆದ ಕೊನೆಯ 20 ನಿಮಿಷಗಳ ವಿವರವನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಯಿಗೆ ಕರೆ ಮಾಡಬೇಕಿದೆ ಎಂದು ಹೇಳಿದ ರಾಯ್ ಅವರು, ತಮ್ಮ ಜೊತೆಯಲ್ಲಿದ್ದ ಜೋಸೆಫ್ ಅವರನ್ನು ಕ್ಯಾಬಿನ್‌ನಿಂದ ಹೊರಗೆ ಕಳುಹಿಸಿದ್ದರು. ಸುಮಾರು 20 ನಿಮಿಷಗಳ ಬಳಿಕ ಕ್ಯಾಬಿನ್‌ಗೆ ತೆರಳಿದಾಗ, ರಾಯ್ ಅವರು ರಕ್ತಸಿಕ್ತ ಸ್ಥಿತಿಯಲ್ಲಿ ಕುಳಿತಿರುವುದನ್ನು ಕಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: 17 ವರ್ಷದ ವಿದ್ಯಾರ್ಥಿಯೊಂದಿಗೆ ಅಕ್ರಮ ಸಂಬಂಧ: ಮಾಜಿ ಶಿಕ್ಷಕಿ ಮೆಕೆನ್ನಾ ಕಿಂಡ್ರೆಡ್ ಪ್ರಕರಣದಲ್ಲಿ ಹೊಸ ಸಂದೇಶಗಳು ಬಹಿರಂಗ

ಇದನ್ನು ಓದಿ: ಹೋಟೆಲ್ ರೂಮ್‌ನಲ್ಲಿ ಎಲ್ಲವೂ ಇರುತ್ತದೆ… ಆದರೆ ಗಡಿಯಾರ ಮಾತ್ರ ಯಾಕಿಲ್ಲ? ಇದರ ಹಿಂದಿನ ಅಚ್ಚರಿಯ ಕಾರಣ ನಿಮಗೆ ಗೊತ್ತಾ?

ಇದನ್ನು ಓದಿ: ಐಟಿ ದಾಳಿ ಬೆನ್ನಲ್ಲೇ ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!!!

ದೂರುದಾರ ಟಿ.ಎ. ಜೋಸೆಫ್ ಅವರ ಹೇಳಿಕೆಯಂತೆ, 30.01.2026 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಅವರು ಮತ್ತು ಸಿ.ಜೆ. ರಾಯ್ ಅವರು ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಚೇರಿಗೆ ಆಗಮಿಸಿ ಆದಾಯ ತೆರಿಗೆ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದರು. ನಂತರ ರಾಯ್ ತಮ್ಮ ಖಾಸಗಿ ಕ್ಯಾಬಿನ್‌ಗೆ ತೆರಳಿ, ಸ್ವಲ್ಪ ಸಮಯದ ಬಳಿಕ ತಾಯಿಗೆ ಮಾತನಾಡಬೇಕಿದೆ ಎಂದು ತಿಳಿಸಿದ್ದರು. ಅದಾದ ನಂತರ ಜೋಸೆಫ್ ಹೊರಗೆ ಬಂದಿದ್ದು, ಸುಮಾರು 10 ನಿಮಿಷಗಳ ನಂತರ ಮರಳಿ ಕ್ಯಾಬಿನ್ ಕಡೆ ಹೋದಾಗ, ಭದ್ರತಾ ಸಿಬ್ಬಂದಿ ಯಾರನ್ನೂ ಒಳಗೆ ಬಿಡಬೇಡಿ ಎಂದು ರಾಯ್ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಮತ್ತೆ 10 ನಿಮಿಷಗಳ ನಂತರ ಕ್ಯಾಬಿನ್ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ, ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿ ಅದನ್ನು ಮುರಿದು ಒಳಗೆ ಪ್ರವೇಶಿಸಲಾಯಿತು. ಅಲ್ಲಿ ರಾಯ್ ಅವರು ತಮ್ಮ ಕುರ್ಚಿಯಲ್ಲಿ ರಕ್ತಸಿಕ್ತ ಬಟ್ಟೆ ಧರಿಸಿ ಕುಳಿತ ಸ್ಥಿತಿಯಲ್ಲಿ ಕಂಡುಬಂದರು. ದೇಹ ತಣ್ಣಗಾಗಿರುವುದನ್ನು ಗಮನಿಸಿ ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡಲಾಯಿತು.

ಆಂಬುಲೆನ್ಸ್ ಮೂಲಕ ರಾಯ್ ಅವರನ್ನು ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ಸಿಬ್ಬಂದಿ ನಾಡಿ ಪರೀಕ್ಷಿಸಿದಾಗ ಮಿಡಿತ ನಿಂತಿರುವುದು ದೃಢಪಟ್ಟಿತು. ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗಕ್ಕೆ ದಾಖಲಿಸಿದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಪೂರ್ಣ ಘಟನೆ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರುದಾರರು ಮನವಿ ಮಾಡಿದ್ದಾರೆ. ಜೊತೆಗೆ ಅವರು ಬಳಸಿದ ಪಿಸ್ತೂಲ್‌ಗೆ ಲೈಸೆನ್ಸ್ ಇರಲಿಲ್ಲವೋ ಎಂಬ ಅನುಮಾನವೂ ವ್ಯಕ್ತವಾಗಿದೆ.

ಇತ್ತ, ಕಳೆದ ಮೂರು ದಿನಗಳಿಂದ ಕೇರಳದ ಕೊಚ್ಚಿಯಿಂದ ಆಗಮಿಸಿದ್ದ ಆದಾಯ ತೆರಿಗೆ ಅಧಿಕಾರಿಗಳ ತಂಡವು ಬೆಂಗಳೂರಿನ ತಮ್ಮ ಸಹೋದ್ಯೋಗಿಗಳೊಂದಿಗೆ ಕಾನ್‌ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೋಧ ಕಾರ್ಯ ನಡೆಸುತ್ತಿತ್ತು. ಕಳೆದ ತಿಂಗಳಲ್ಲಿಯೂ ನಡೆದ ದಾಳಿಯಲ್ಲಿ ಕೆಲವು ಪ್ರಮುಖ ದಾಖಲೆಗಳನ್ನು ಪರಿಶೀಲಿಸಿ ವಶಪಡಿಸಿಕೊಂಡಿದ್ದರು. ಅದರ ಮುಂದುವರಿಕೆಯಾಗಿ ಮತ್ತೊಮ್ಮೆ ಶೋಧ ಕಾರ್ಯ ನಡೆದಿತ್ತು ಎಂದು ತಿಳಿದು ಬಂದಿದೆ.

ಘಟನಾ ಕ್ರಮದಂತೆ, ಮಧ್ಯಾಹ್ನ 12 ಗಂಟೆಗೆ ಐಟಿ ಅಧಿಕಾರಿಗಳು ಕಚೇರಿಗೆ ಆಗಮಿಸಿದ್ದು, ಮಧ್ಯಾಹ್ನ 2 ಗಂಟೆಗೆ ಸಿ.ಜೆ. ರಾಯ್ ಕಚೇರಿಗೆ ಬಂದಿದ್ದಾರೆ. 2 ರಿಂದ 3 ಗಂಟೆಯವರೆಗೆ ಕೆಲವು ದಾಖಲೆಗಳಿಗೆ ಸಹಿ ಹಾಗೂ ಪರಿಶೀಲನೆ ನಡೆದಿದೆ. ಮಧ್ಯಾಹ್ನ 3 ಗಂಟೆಗೆ ರಾಯ್ ತಮ್ಮ ಖಾಸಗಿ ಕ್ಯಾಬಿನ್‌ಗೆ ತೆರಳಿದ್ದು, ಕೆಲವೇ ನಿಮಿಷಗಳಲ್ಲಿ ಘಟನೆ ನಡೆದಿದೆ. ನಂತರ ಉದ್ಯೋಗಿಗಳು ಮತ್ತು ಅಧಿಕಾರಿಗಳು ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರೂ, ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಐಟಿ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿರುವ ಪೊಲೀಸರು, ಸಂಸ್ಥೆಯ ಮೇಲಿದ್ದ ನಿರ್ಬಂಧ ಆದೇಶಗಳನ್ನು ತೆರವುಗೊಳಿಸುವ ಉದ್ದೇಶದಿಂದ ಮಾತ್ರ ದಾಖಲೆ ಪರಿಶೀಲನೆ ನಡೆದಿತ್ತು ಎಂದು ತಿಳಿಸಿದ್ದಾರೆ. ರಾಯ್ ಅವರ ದಿನನಿತ್ಯದ ಕಾರ್ಯಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇರಲಿಲ್ಲ. ಅವರು ಎಷ್ಟು ಸುತ್ತು ಗುಂಡು ಹಾರಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಂಡಿನ ಶಬ್ದ ಕೇಳಿದ ತಕ್ಷಣ ಕಚೇರಿಯಲ್ಲಿ ಗೊಂದಲ ಉಂಟಾಗಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಾಯ್ ಅವರು ಪಿಸ್ತೂಲ್ ಮತ್ತು ಕೆಲವು ದಾಖಲೆಗಳನ್ನು ಹೊಂದಿದ್ದ ಬ್ರೀಫ್‌ಕೇಸ್ ಅನ್ನು ಸದಾ ತಮ್ಮ ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದರು ಎಂದು ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ. ಕೆಲವೊಮ್ಮೆ ಮರೆತರೆ ಕೂಡ ಭದ್ರತಾ ಸಿಬ್ಬಂದಿಯನ್ನು ಕಳುಹಿಸಿ ತರಿಸಿಕೊಳ್ಳುತ್ತಿದ್ದರೆಂದು ಹೇಳಿದ್ದಾರೆ.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಮಾತನಾಡಿ, ಈ ಪ್ರಕರಣದಲ್ಲಿ ಬಳಸಲಾದ ಪಿಸ್ತೂಲಿನ ತಯಾರಿಕೆ ಹಾಗೂ ಕ್ಯಾಲಿಬರ್ ಕುರಿತು ಬಾಲಿಸ್ಟಿಕ್ ತಜ್ಞರು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಟಿ.ಎ. ಜೋಸೆಫ್ ನೀಡಿದ ದೂರಿನ ಆಧಾರದಲ್ಲಿ ಅಸಹಜ ಮರಣ ಪ್ರಕರಣ ದಾಖಲಿಸಲಾಗಿದ್ದು, ಐಟಿ ಅಧಿಕಾರಿಗಳ ವಿರುದ್ಧ ಪ್ರಸ್ತುತ ಯಾವುದೇ ಆರೋಪಗಳಿಲ್ಲ. ಕುಟುಂಬದವರು ಮುಂದಿನ ದಿನಗಳಲ್ಲಿ ಆರೋಪ ಮಾಡಿದರೆ ಪ್ರತ್ಯೇಕ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ರಾಯ್ ಅವರ ಸಹೋದರ ಸಿ.ಜೆ. ಬಾಬು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಐಟಿ ಅಧಿಕಾರಿಗಳಿಂದ ಬಂದ ಒತ್ತಡವೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ರಾಯ್ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ದುಬೈನಲ್ಲಿ ನೆಲೆಸಿದ್ದು, ಶನಿವಾರ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಅವರ ತಾಯಿ ಕೊರಮಂಗಲದ ಬಳಿ ವಾಸಿಸುತ್ತಿದ್ದು, ರಾಯ್ ಬೆಂಗಳೂರಿಗೆ ಬಂದಾಗ ಹೆಚ್ಚಾಗಿ ಐದು ನಕ್ಷತ್ರ ಹೋಟೆಲ್‌ಗಳಲ್ಲಿ ತಂಗುತ್ತಿದ್ದರು ಎಂದು ಸಹಾಯಕರು ಮಾಹಿತಿ ನೀಡಿದ್ದಾರೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment