ವಿಜಯಪುರ ನಗರದಲ್ಲಿ ಸರಗಳ್ಳರ ಹಾವಳಿ ಮತ್ತೆ ಹೆಚ್ಚಾಗಿದ್ದು, ಮಹಿಳೆಯೊಬ್ಬರ ಮೇಲೆ ಅಮಾನುಷ ದಾಳಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ದಿವಟಗೇರಿ ಗಲ್ಲಿಯಲ್ಲಿ ಶುಕ್ರವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ.
ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ಕಲಾವತಿ ಗಾಯ್ಕವಾಡ್ (45) ಎಂಬ ಮಹಿಳೆಯ ಮೇಲೆ ಇಬ್ಬರು ಮುಸುಕುಧಾರಿಗಳು ಹಲ್ಲೆ ನಡೆಸಿದ್ದಾರೆ. ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ ಕಿವಿಯೋಲೆಗಳನ್ನು ಕಿತ್ತುಕೊಳ್ಳುವ ವೇಳೆ ಕಿವಿ ಕತ್ತರಿಸಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲ್ಲೆ ವೇಳೆ ಮುಖ ಮತ್ತು ಬಾಯಿಗೂ ಗಾಯಗಳಾಗಿವೆ.
ಆರೋಪಿಗಳು ಸುಮಾರು 10 ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು 1 ಗ್ರಾಂ ಚಿನ್ನದ ಕಿವಿಯೋಲೆ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಗಾಂಜಾ ಮತ್ತಿನಲ್ಲಿ ಮುಖವಾಡ ಧರಿಸಿದ್ದ ಇಬ್ಬರು ಯುವಕರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಗಾಯಗೊಂಡ ಮಹಿಳೆಯನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕತ್ತರಿಸಿದ ಕಿವಿಗೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.






