5.25 ಕೋಟಿ ರೂ. ಇನ್ಶೂರೆನ್ಸ್ ಹಣ ಲಪಟಾಯಿಸುವ ಸಂಚಿನೊಂದಿಗೆ ಅನಾರೋಗ್ಯಪೀಡಿತ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಪ್ರಕರಣ ಭೇದಿಸಿರುವ ಜತೆಗೆ ಸೂತ್ರದಾರ ಗಂಗಾವತಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಸೇರಿ 6 ಆರೋಪಿಗಳನ್ನು ಬಂಧಿಸುವಲ್ಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಜೀರಿಗನೂರು ಮೂಲದ ನಗರ ನಿವಾಸಿ ಗಂಗಾಧರ (35) ಕೊಲೆಯಾದವರು. ಕೊಪ್ಪಳ ಜಿಲ್ಲೆ ಹೊಸಲಿಂಗಾಪುರದ ರವಿ, ನಗರದ ಪಿ.ಅಜಯ್, ರಿಯಾಜ್, ಆಯಕ್ಸಿಸ್ ಬ್ಯಾಂಕ್ ಸೀನಿಯರ್ ಬ್ಯುಸಿನೆಸ್ ಸೇಲ್ಸ್ ಮ್ಯಾನೇಜರ್ ಆದ ಬಸವೇಶ್ವರ ಬಡಾವಣೆ ನಿವಾಸಿ ಆರ್.ವೈ.ಯೋಗರಾಜ್ ಸಿಂಗ್, ಕೊಪ್ಪಳ ಜಿಲ್ಲೆ ಗಂಗಾವತಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಕೃಷ್ಣಪ್ಪ ಹಾಗೂ ಹುಲಿಗೆಮ್ಮ ಬಂಧಿತ ಆರೋಪಿಗಳು.
ಗಂಗಾಧರ ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವಿಷಯ ಆರೋಪಿ ಯೋಗರಾಜ್ ಸಿಂಗ್‌ಗೆ ತಿಳಿದಿತ್ತು. ಸಂಚು ರೂಪಿಸುವಲ್ಲಿ ಮುಂದಿದ್ದ ಗಂಗಾವತಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಕೃಷ್ಣಪ್ಪ ಅವರಿಗೆ ಗಂಗಾಧರ ಅವರನ್ನು ಫೆಬ್ರವರಿಯಲ್ಲಿ ಪರಿಚಯಿಸಿದ್ದ. ಗಂಗಾಧರ ಐದಾರು ತಿಂಗಳಲ್ಲೇ ಸಾವನ್ನಪ್ಪಲಿದ್ದಾರೆ ಎಂದೇ ಆರೋಪಿಗಳು ನಂಬಿ ಈ ಸಂಚು ರೂಪಿಸಿದ್ದರು. ಆರೋಪಿ ಕೃಷ್ಣಪ್ಪನೇ ನಗರದ ಆಯಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ಗಂಗಾಧರ ಹೆಸರಲ್ಲಿ ಖಾತೆ ತೆರೆದಿದ್ದ. 6 ಬೇರೆ ಬೇರೆ ಕಂಪನಿಗಳಲ್ಲಿ ಅಂದಾಜು 5.25 ಕೋಟಿ ರೂ. ವಿಮೆ ಮಾಡಿಸಿದ್ದ. ವಿಮೆಗೆ ನಾಮಿನಿ ಬೇಕಾಗಿದ್ದರಿಂದ ವಿಧವೆ ಹುಲಿಗೆಮ್ಮ ಅವರನ್ನು ಪುಸಲಾಯಿಸಿ, ನಕಲಿ ಮದುವೆಗೆ ಒಪ್ಪಿಸಿದ್ದ. ಹುಲಿಗೆಮ್ಮ ಜತೆ ಗಂಗಾಧರ ಅವರಿಗೆ ನಕಲಿ ಮದುವೆ ನೋಂದಣಿಯನ್ನೂ ಮಾಡಿಸಿದ್ದ.
ಐದಾರು ತಿಂಗಳು ಕಳೆದರೂ ಅನಾರೋಗ್ಯ ಪೀಡಿತ ಗಂಗಾಧರ ಸಾವನ್ನಪ್ಪದೇ ಇದ್ದಾಗ ಉಪಪ್ರಾಚಾರ್ಯ ಕೃಷ್ಣಪ್ಪ, ಆರ್.ವೈ.ಯೋಗರಾಜ್ ಸಿಂಗ್ ಕೊಲೆಯ ಸಂಚು ರೂಪಿಸಿದ್ದಾರೆ. ಈ ಕೃತ್ಯಕ್ಕೆ ಹೊಸಲಿಂಗಾಪುರದ ರವಿ, ಹೊಸಪೇಟೆಯ ಪಿ.ಅಜಯ್, ರಿಯಾಜ್ ನೆರವುಪಡೆದಿದ್ದಾರೆ. ಗಂಗಾಧರ ಹೆಸರಲ್ಲಿ ಬೈಕ್ ಖರೀದಿಸಿದ್ದಾರೆ. ಈ ವಾಹನದ ಮೇಲೂ 15 ಲಕ್ಷ ರೂ. ವಿಮೆ ಮಾಡಿಸಿದ್ದರು. ಸೆ.27ರಂದು ಮನೆಯಿಂದ ಹೊರಗೆ ಬಂದಿದ್ದ ಗಂಗಾಧರ ಅವರನ್ನು ಪುಸಲಾಯಿಸಿ ಕಾರಿನಲ್ಲಿಕರೆದೊಯ್ದಿದ್ದಾರೆ. ನಗರ ಹೊರವಲಯದಲ್ಲಿ ಕತ್ತುಹಿಸುಕಿ ಹತ್ಯೆ ಮಾಡಿದ್ದಾರೆ. ನಂತರ ನಗರದ ಎಚ್.ಎಲ್ಸಿ. ಕಾಲುವೆ ಬಳಿ ಶವ ಬಿಸಾಕಿದ್ದಾರೆ. ಅಪರಿಚಿತ ಕಾರು ಮತ್ತು ಗಂಗಾಧರ ಅವರಿದ್ದ ಬೈಕ್ ಮಧ್ಯೆ ಅಪಘಾತವಾಗಿದೆ ಎಂಬ ನಂಬಿಕೆ ಹುಟ್ಟಿಸಿದ್ದಾರೆ.
ಗಂಗಾಧರ ಅವರ ಪತ್ನಿ ಕೆ.ಶಾರದಮ್ಮ, ಸೆ.28ರಂದು ನೀಡಿದ ದೂರಿನನ್ವಯ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಗೆ ಎಸ್ಪಿ ಎಸ್.ಜಾಹ್ನವಿ ಅವರು 3 ತಂಡಗಳನ್ನು ರಚಿಸಿದರು. ತಕ್ಷಣ ಕಾರ್ಯಾಚರಣೆಗೆ ಇಳಿದ ಈ ತಂಡಗಳು, ಘಟನೆ ನಡೆದ 24 ತಾಸಿನಲ್ಲೇ ಎಲ್ಲಆರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿವೆ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಕಾರು, ಹಣ ಹಾಗೂ ಮೊಬೈಲ್‌ಗಳನ್ನು ವಶಪಡಿಸಲಾಗಿದೆ.
ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಜಿ.ಮಂಜುನಾಥ ಮಾರ್ಗದರ್ಶನದಲ್ಲಿ ಹೊಸಪೇಟೆ ಡಿವೈಎಸ್ಪಿ ಡಾ.ಟಿ.ಮಂಜುನಾಥ ನೇತೃತ್ವದ ತನಿಖಾ ತಂಡ ರಚಿಸಲಾಗಿತ್ತು. ಪಟ್ಟಣ ಠಾಣೆ ಪಿಐ ಲಖನ್ ಆರ್.ಮಸಗುಪ್ಪಿ, ಸಂಚಾರ ಠಾಣೆ ಪಿಐ ಡಿ.ಹುಲುಗಪ್ಪ, ಪಟ್ಟಣ ಠಾಣೆ ಪಿಎಸ್‌ಐ ಎಸ್.ಪಿ.ನಾಯ್ಕ, ಎಎಸ್‌ಐ ಗಳಾದ ಕೋರಿ ಕೃಷ್ಣಪ್ಪ, ಕೀಮ್ಯಾನಾಯ್ಕ, ದೊಡ್ಡ ಈರಣ್ಣ, ಹೆಡ್ ಕಾನ್ಸ್‌ಟೆಬಲ್‌ಗಳಾದ ಕೃಷ್ಣಪ್ಪ, ಶ್ರೀನಾಥ, ಬಿ.ರಾಘವೇಂದ್ರ, ಲಿಂಗರಾಜ್, ನೀಲಾಂಜನ ಮೂರ್ತಿ, ಕಾನ್ಸ್‌ಟೆಬಲ್‌ಗಳಾದ ಎ.ಕೊಟ್ರೇಶ್, ಜೋಗಿ ಕೊಟ್ರೇಶ್, ಫಕೀರಪ್ಪ, ದೇವೇಂದ್ರ, ಶಿವಪ್ಪ, ತನಿಖಾ ಸಹಾಯಕರಾದ ಕೆ.ಸಿದ್ದಪ್ಪ, ಕೆ.ನಾಗರಾಜ, ಹಾಲೇಶ್ ಗೌಡ, ಆನಂದ ಗೌಡ, ಹನುಮಾನಾಯ್ಕ್, ಬಿ.ಚಂದ್ರಪ್ಪ ಹಾಗೂ ರಘು ಅವರು ಕಾರ್ಯಾಚರಣೆಯಲ್ಲಿ ಇದ್ದರು.






