ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧಗಳು ಸರಿಪಡಿಸಲಾಗದಷ್ಟು ಹದಗೆಟ್ಟಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. “ಕರಾಳ ಚೀನಾದತ್ತ ನಾವು ಭಾರತ ಮತ್ತು ರಷ್ಯಾವನ್ನು ಕಳೆದುಕೊಂಡಿದ್ದೇವೆ” ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇದರಿಂದ ಅಮೆರಿಕದ ವಿದೇಶಾಂಗ ನೀತಿ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಮೂರು ದೇಶಗಳ ನಾಯಕರು ಒಟ್ಟಾಗಿ ಭಾಗವಹಿಸಿದ ಕೆಲವೇ ದಿನಗಳ ನಂತರ, ಅವರು ಟ್ರುಥ್ ಸೋಶಿಯಲ್ನಲ್ಲಿ ನಿರಾಶೆ ತುಂಬಿದ ಪೋಸ್ಟ್ ಮಾಡಿದ್ದಾರೆ.
ಭಾರತ ಹಾಗೂ ರಷ್ಯಾವನ್ನು ಕಳೆದುಕೊಂಡಿದ್ದೇವೆ ಎಂಬ ಅಸಮಾಧಾನವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆತಿಥ್ಯ ವಹಿಸಿದ್ದ ಟಿಯಾಂಜಿನ್ ಎಸ್ಸಿಒ ಶೃಂಗಸಭೆಯಲ್ಲಿ ಅನೇಕ ದೇಶಗಳ ನಾಯಕರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಜರಿದ್ದರು. ಈ ಮೂವರು ನಾಯಕರ ಆತ್ಮೀಯತೆ ಅಮೆರಿಕೆಗೆ ಗಂಭೀರ ಸಂದೇಶ ಕಳುಹಿಸಿತು. ಹಲವಾರು ರಾಜಕೀಯ ವಿಶ್ಲೇಷಕರು ಇದನ್ನು ಐತಿಹಾಸಿಕ ತಿರುವು ಎಂದು ಪರಿಗಣಿಸಿದ್ದಾರೆ. ಅಮೆರಿಕಾ ನಡೆಸುತ್ತಿರುವ ಸುಂಕ ಯುದ್ಧದ ಮಧ್ಯೆ, ಇದನ್ನು ಹೊಸ ಜಾಗತಿಕ ವ್ಯವಸ್ಥೆ ಎಂದೂ ತಜ್ಞರು ಹೇಳಿದ್ದಾರೆ.
“ನಾವು ಭಾರತ ಮತ್ತು ರಷ್ಯಾವನ್ನು ಅತ್ಯಂತ ಕರಾಳ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ! ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್,” ಎಂದು ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. ಅದರೊಂದಿಗೆ ಟಿಯಾಂಜಿನ್ ಸಭೆಯಲ್ಲಿ ಪುಟಿನ್ ಮತ್ತು ಜಿನ್ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಕಾಣಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಟ್ರಂಪ್ ಅವರ ಪೋಸ್ಟ್ ಕುರಿತು ಭಾರತವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, “ಪ್ರಸ್ತುತ ಈ ವಿಷಯದಲ್ಲಿ ನಾವು ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ” ಎಂದು ಹೇಳಿದೆ. ಇದರೊಂದಿಗೆ ಭಾರತ ತನ್ನ ನಿಲುವನ್ನು ಮೌನವಾಗಿರಿಸುವ ಮೂಲಕ ತಿಳಿಸಿದೆ.
ಟ್ರಂಪ್ ಭಾರೀ ತೆರಿಗೆ ವಿಧಿಸಿದ ಹಿನ್ನೆಲೆಯಲ್ಲಿ, ಭಾರತ–ಅಮೆರಿಕ ಸಂಬಂಧಗಳು ತೀವ್ರವಾಗಿ ಹದಗೆಟ್ಟಿವೆ. ಕಳೆದ ತಿಂಗಳು ನವದೆಹಲಿಗೆ ಶೇ.50ರಷ್ಟು ಸುಂಕ ವಿಧಿಸಿದ ನಂತರ ದ್ವಿಪಕ್ಷೀಯ ಬಾಂಧವ್ಯಗಳು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕೆಳಮಟ್ಟ ತಲುಪಿವೆ. ಜೊತೆಗೆ, ರಷ್ಯಾದಿಂದ ಭಾರತ ನಿರಂತರವಾಗಿ ತೈಲ ಖರೀದಿಸುತ್ತಿರುವುದರಿಂದ ಅಮೆರಿಕ ಶೇ.25ರಷ್ಟು ಮೂಲ ಸುಂಕ ಹಾಗೂ ಶೇ.25ರಷ್ಟು ಹೆಚ್ಚುವರಿ ದಂಡವನ್ನು ಜಾರಿಗೊಳಿಸಿದೆ.
ಟ್ರಂಪ್ ಚೀನಾದ ಮೇಲೆ ಶೇ.145ರಷ್ಟು ಸುಂಕ ವಿಧಿಸಲು ಮುಂದಾಗಿದ್ದರೂ, ಅದನ್ನು 90 ದಿನಗಳವರೆಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸುಂಕ ಏರಿಕೆ ಮಾತ್ರವಲ್ಲದೆ, ಅವರ ಸರ್ಕಾರದ ಹಿರಿಯ ಅಧಿಕಾರಿಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ಟೀಕೆಗಳನ್ನು ಮುಂದುವರಿಸಿದ್ದಾರೆ. ಇದರಿಂದ ನವದೆಹಲಿಯು ಅಮೆರಿಕಾ ವಿರೋಧಿ ಶಕ್ತಿಗಳಾದ ಚೀನಾ ಮತ್ತು ರಷ್ಯಾ ಜೊತೆಗೆ ಸಂಬಂಧ ಬಲಪಡಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರಂಭದಲ್ಲಿ ಒಂದು ತಾತ್ಕಾಲಿಕ ನಿಲುವಾಗಿದ್ದದ್ದು, ಈಗ ಭಾರತವು “ಬಹುಧ್ರುವೀಯತೆ ಮತ್ತು ಬಹುಪಕ್ಷೀಯತೆಯ ಹೊಸ ಯುಗ”ವೆಂದು ಕರೆಯುವ ದಿಕ್ಕಿನಲ್ಲಿ ಬೆಳೆಯುತ್ತಿರುವಂತಿದೆ. ಶೀತಯುದ್ಧದ ನಂತರ ಅಮೆರಿಕಾ ನಡೆಸಿಕೊಂಡು ಬಂದ ಏಕಧ್ರುವೀಯ ಪ್ರಾಬಲ್ಯಕ್ಕೆ ಇದು ನೇರ ಸವಾಲು ಎನಿಸಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.






