ನಗರದ ಸ್ಟೇಷನ್ ಬಝಾರ್ ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆ ಹಣ ಬಿಡುಗಡೆ ಮಾಡುವುದಕ್ಕೆ ಲಂಚ ಪಡೆಯುತ್ತಿದ್ದ ವೇಳೆ ಅಂಗನವಾಡಿ ಟೀಚರ್ ಹಾಗೂ ಯು.ಎಫ್.ಡಬ್ಲ್ಯೂಸಿ ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬುಧವಾರ ನಡೆದಿದೆ.
ಬಂಧಿತರನ್ನು ಅಂಗನವಾಡಿ ಟೀಚರ್ ಹೀನಾ ಹಾಗೂ ಯು.ಎಫ್.ಡಬ್ಲ್ಯೂಸಿ ಸಿಬ್ಬಂದಿ ಪಿಂಕುಬಾಯಿ ಗಾಯಕ್ವಾಡ್ ಎಂದು ಗುರುತಿಸಲಾಗಿದೆ.
ಇದನ್ನು ಓದಿ: ಕಲಬುರಗಿ: ಅಣ್ಣನ ಅಗಲಿಕೆ ದುಃಖ ತಾಳಲಾರದೆ ತಮ್ಮನೂ ಸಾವನ್ನಪ್ಪಿದ ಘಟನೆ
ಇದನ್ನು ಓದಿ: ಕಲಬುರಗಿ: ಹೆಡ್‌ಕಾನ್‌ಸ್ಟೆಬಲ್‌ಗೆ ₹80.40 ಲಕ್ಷ ಸೈಬರ್ ವಂಚನೆ
ಉದಯನಗರ ನಿವಾಸಿ ಸೌಭಾಗ್ಯ ಬಲಭೀಮ ರಾಠೋಡ ಅವರು ನೀಡಿದ ದೂರಿನ ಮೇರೆಗೆ, ಲೋಕಾಯುಕ್ತ ಎಸ್ಪಿ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್-2 ರಾಜಶೇಖರ ಬಡದೆಸಾರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಸ್ಟೇಷನ್ ಬಝಾರ್ ಅಂಗನವಾಡಿ ಕೇಂದ್ರಕ್ಕೆ ಮೂರು ತಿಂಗಳ ಮೊಟ್ಟೆ ಹಣವಾಗಿ ಒಟ್ಟು 14,490 ರೂ. ಜಮೆಯಾಗಿತ್ತು. ಈ ಹಣವನ್ನು ಬಿಡುಗಡೆ ಮಾಡುವ ನೆಪದಲ್ಲಿ ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ತಿಂಗಳ ಮೊಟ್ಟೆ ಹಣವಾಗಿ 4,830 ರೂ. ಹಾಗೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿಗೆ ತಲಾ 600 ರೂ. ನಂತೆ 1,200 ರೂ. ಸೇರಿ ಒಟ್ಟು 6,030 ರೂ. ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದೆ.
ಇನ್ನು ಓದಿ: ಕಲಬುರಗಿ: 10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಫ್‌ಡಿಎ ಲೋಕಾಯುಕ್ತ ಬಲೆಗೆ





