ವಾಷಿಂಗ್ಟನ್:ಗ್ರೀನ್‌ಲ್ಯಾಂಡ್ ಮೇಲಿನ ಡೆನ್ಮಾರ್ಕ್‌ನ ಸಾರ್ವಭೌಮತ್ವವನ್ನು ತಳ್ಳಿ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಒಳ್ಳೆಯದಾಗಲಿ, ಕೆಟ್ಟದಾಗಲಿ—ಅವರು ಇಷ್ಟಪಡಲಿ ಅಥವಾ ಇಲ್ಲದಿರಲಿ—ಗ್ರೀನ್‌ಲ್ಯಾಂಡ್‌ನ್ನು ನಾವು ವಶಕ್ಕೆ ಪಡೆಯುತ್ತೇವೆ” ಎಂದು ಕಠಿಣ ಹೇಳಿಕೆ ನೀಡಿದ್ದಾರೆ.
ವೆನಿಜುವೆಲಾವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿನ ತೈಲ ಲಾಭದ ಕುರಿತು ಶ್ವೇತಭವನದಲ್ಲಿ ಅಮೆರಿಕದ ತೈಲ ಕ್ಷೇತ್ರದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಟ್ರಂಪ್, “ನಾನು ಗ್ರೀನ್‌ಲ್ಯಾಂಡ್‌ನ್ನು ಶಾಂತಿಯುತ ಒಪ್ಪಂದದ ಮೂಲಕ ಪಡೆಯಲು ಬಯಸುತ್ತೇನೆ. ಆದರೆ ಅದು ಸಾಧ್ಯವಾಗದಿದ್ದರೆ, ಬಲ ಪ್ರಯೋಗದ ಮೂಲಕ ವಶಪಡಿಸಿಕೊಳ್ಳಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನು ಓದಿ:“ನಾನು ಭಾರತದ ಜನರನ್ನು ಪ್ರೀತಿಸುತ್ತೇನೆ..”:ವೈಟ್ ಹೌಸ್ ನಲ್ಲಿ ದೀಪಾವಳಿ ಆಚರಿಸಿದ ಟ್ರಂಪ್!!
ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾದ ಸೇನಾ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಖನಿಜ ಸಂಪತ್ತಿನಿಂದ ಸಮೃದ್ಧವಾಗಿರುವ ಗ್ರೀನ್‌ಲ್ಯಾಂಡ್‌ನ್ನು ನಿಯಂತ್ರಿಸುವುದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅತ್ಯಂತ ಅಗತ್ಯವೆಂದು ಟ್ರಂಪ್ ವಾದಿಸಿದ್ದಾರೆ. “ನಾವು ಗ್ರೀನ್‌ಲ್ಯಾಂಡ್‌ನ್ನು ವಶಕ್ಕೆ ಪಡೆಯದಿದ್ದರೆ, ರಷ್ಯಾ ಅಥವಾ ಚೀನಾ ಅದನ್ನು ಆಕ್ರಮಿಸಬಹುದು. ಅದನ್ನು ನಾವು ಅನುಮತಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಗ್ರೀನ್‌ಲ್ಯಾಂಡ್ ಮೇಲೆ ಹಕ್ಕು ಸಾಧಿಸುವ ಅಮೆರಿಕದ ಧೋರಣೆಗೆ ಡೆನ್ಮಾರ್ಕ್ ಹಾಗೂ ಇತರೆ ಯುರೋಪಿಯನ್ ಮಿತ್ರ ರಾಷ್ಟ್ರಗಳು ತೀವ್ರ ಆಘಾತ ಮತ್ತು ಆಕ್ಷೇಪ ವ್ಯಕ್ತಪಡಿಸಿವೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಡೆನ್ಮಾರ್ಕ್, ಅಮೆರಿಕ ತನ್ನ ಸಾರ್ವಭೌಮತ್ವಕ್ಕೆ ಧಕ್ಕೆ ತಂದು ಆಕ್ರಮಣಕ್ಕೆ ಮುಂದಾದರೆ, ಅಲ್ಲಿನ ಸೈನಿಕರು “ಮೊದಲು ಗುಂಡು ಹಾರಿಸಿ, ನಂತರ ಪ್ರಶ್ನಿಸುವ” ಆದೇಶವನ್ನು ಪಾಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ (ಏಜೆನ್ಸೀಸ್).






