---Advertisement---

ನಿಧಿ ಆಸೆಗೆ 8 ತಿಂಗಳ ಮಗುವನ್ನು ಬಲಿ ಕೊಡಲು ಯತ್ನಿಸಿದ ಆರೋಪ

On: January 4, 2026 3:53 AM
Follow Us:
---Advertisement---

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ವ್ಯಾಪ್ತಿಯಲ್ಲಿ ನಿಧಿ ಆಸೆಗಾಗಿ 8 ತಿಂಗಳ ಗಂಡು ಮಗುವನ್ನು ಬಲಿ ಕೊಡಲು ಪೋಷಕರೇ ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಿಖರ ಮಾಹಿತಿ ಆಧರಿಸಿ ದಾಳಿ ನಡೆಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಸ್ತಕ್ಷೇಪ ಮಾಡಿ ಮಗುವನ್ನು ರಕ್ಷಿಸಿದ್ದಾರೆ.

ಇದನ್ನು ಓದಿ: ತಿರುಪತಿ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ಕುಡುಕನ ಅವಾಂತರ; ಗೋಪುರ ಏರಿ ಕಳಶ ಎಳೆಯಲು ಯತ್ನ

ಸೂಲಿಬೆಲೆಯ ಜನತಾ ಕಾಲೋನಿಯಲ್ಲಿರುವ ಸೈಯದ್ ಇಮ್ರಾನ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯಲ್ಲಿ ನಿಧಿ ದೊರೆಯಲಿದೆ ಎಂಬ ನಂಬಿಕೆಯಿಂದ ವಿಶೇಷ ಪೂಜೆ ನಡೆಯುತ್ತಿತ್ತು. ಮನೆಯ ಕೋಣೆಯೊಂದರಲ್ಲಿ ಗುಂಡಿ ತೆಗಿ ಪೂಜೆ ನಡೆಸಲಾಗುತ್ತಿದ್ದು, ಈ ವೇಳೆ ಮಗುವನ್ನು ಬಲಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂಬ ಆರೋಪವಿದೆ.

ನಿನ್ನೆ ಹುಣ್ಣಿಮೆ ಹಿನ್ನೆಲೆಯಲ್ಲಿ ಮಗು ಬಲಿ ನೀಡಲಾಗುತ್ತಿದೆ ಎಂಬ ಬಗ್ಗೆ ಸಹಾಯವಾಣಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ಮನೆಯೊಳಗೆ ನಡೆಯುತ್ತಿದ್ದ ಪೂಜೆ ಪತ್ತೆಯಾಗಿದ್ದು, 8 ತಿಂಗಳ ಗಂಡು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ ಶಿಶು ಕೇಂದ್ರಕ್ಕೆ ದಾಖಲಿಸಲಾಗಿದೆ.

ಆರೋಪಿಗಳಾದ ಸೈಯದ್ ಇಮ್ರಾನ್ ಮತ್ತು ಅವರ ಪತ್ನಿ ಸುಮಾರು 8 ತಿಂಗಳ ಹಿಂದೆ ಕೂಲಿ ಕಾರ್ಮಿಕರಿಂದ ಮಗುವನ್ನು ದತ್ತು ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ. ದತ್ತು ಪಡೆದ ಬಳಿಕ ತಮ್ಮ ಹೆಸರಿನಲ್ಲಿ ನಕಲಿ ಜನನ ಪ್ರಮಾಣ ಪತ್ರ ಮಾಡಿಸಿಕೊಂಡಿರುವುದೂ ಬೆಳಕಿಗೆ ಬಂದಿದೆ. ದಾಳಿ ವೇಳೆ ದತ್ತು ಒಪ್ಪಂದದ ಪತ್ರವನ್ನು ದಂಪತಿ ಅಧಿಕಾರಿಗಳಿಗೆ ನೀಡಿದರೂ, ಕಾನೂನುಬದ್ಧ ಪ್ರಕ್ರಿಯೆ ಪಾಲಿಸಿಲ್ಲ ಎಂಬ ಕಾರಣಕ್ಕೆ ಮಗುವನ್ನು ವಶಕ್ಕೆ ಪಡೆಯಲಾಗಿದೆ.

ಘಟನೆಯ ಕುರಿತು ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿ ಸಮಗ್ರ ತನಿಖೆ ನಡೆಸುತ್ತಿದ್ದು, ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಈ ಘಟನೆ ಪ್ರದೇಶದಲ್ಲಿ ತೀವ್ರ ಆಘಾತ ಮತ್ತು ಆತಂಕಕ್ಕೆ ಕಾರಣವಾಗಿದೆ.

Join WhatsApp

Join Now

RELATED POSTS