ಪ್ರತಿ ಹೊಸ ವರ್ಷದ ಆರಂಭದಲ್ಲಿ ನಾವು ನಮ್ಮ ಜೀವನವನ್ನು ಉತ್ತಮಗೊಳಿಸುವ ಅನೇಕ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಆದರೆ ನಿರ್ಧಾರಗಳು ಕೇವಲ ಮಾತಲ್ಲೇ ಉಳಿದು, ಕಾರ್ಯರೂಪಕ್ಕೆ ಬರದೇ ಇರುವ ಸಂದರ್ಭಗಳು ಹೆಚ್ಚಾಗಿವೆ. ಇಂತಹವರಿಗೆ ನಟ ರಮೇಶ್ ಅರವಿಂದ್ ಅವರ ಸ್ಪೂರ್ತಿದಾಯಕ ಸಂದೇಶ ಒಂದು ದಿಕ್ಕು ತೋರಿಸುವ ದೀಪದಂತೆ ಇದೆ. ಜೀವನದಲ್ಲಿ ಅಂದುಕೊಂಡದ್ದೇನು ಸಾಧಿಸಲು ಆಗುತ್ತಿಲ್ಲ ಎಂದು ಭಾವಿಸುವವರು ಅವರ ಈ ಮೂರು ಮಾತುಗಳನ್ನು ಅನುಸರಿಸಿದರೆ ಸಾಕು ಎಂಬುದು ಅವರ ನಂಬಿಕೆ.
ಇದನ್ನು ಓದಿ: ಅಸ್ಸಾಂನಲ್ಲಿ ಅಮಾನವೀಯ ಕೃತ್ಯ: ಮಾಟಮಂತ್ರ ಶಂಕೆಯಲ್ಲಿ ದಂಪತಿ ಮೇಲೆ ಹಲ್ಲೆ, ಜೀವಂತವಾಗಿ ಸುಟ್ಟುಹಾಕಿದ ಗ್ರಾಮಸ್ಥರು..
ಎಲ್ಲರಿಗೂ ತಿಳಿದಿರುವಂತೆ, ರಮೇಶ್ ಅರವಿಂದ್ ಉತ್ತಮ ನಟನಾಗಿರುವುದರ ಜೊತೆಗೆ ಆಳವಾದ ಚಿಂತನೆ ಹೊಂದಿರುವ ವ್ಯಕ್ತಿ ಮತ್ತು ಮನಮುಟ್ಟುವಂತೆ ಮಾತನಾಡುವ ಸ್ಪೂರ್ತಿದಾಯಕ ಮಾತುಗಾರ. ಹೊಸ ವರ್ಷವನ್ನು ಸ್ವಾಗತಿಸುತ್ತಾ ಅವರು ಜನತೆಗೆ ನೀಡಿರುವ ಈ ಸಂದೇಶ ಜೀವನದ ದೃಷ್ಟಿಕೋನವೇ ಬದಲಾಯಿಸುವಂತಿದೆ.
ಪ್ರತಿ ವರ್ಷ ‘ಈ ವರ್ಷ ಇದನ್ನು ಮಾಡಬೇಕು, ಅದನ್ನು ಸಾಧಿಸಬೇಕು, ಹೀಗೆ ಬದುಕಬೇಕು’ ಎಂದು ಯೋಚಿಸುತ್ತೇವೆ. ಆದರೆ ವರ್ಷ ಕಳೆಯುವಷ್ಟರಲ್ಲಿ ಏನೂ ಆಗದೇ ಹೋಗುತ್ತದೆ ಎಂದು ಅವರು ಹೇಳುತ್ತಾರೆ. ಆದ್ದರಿಂದ ಈ ಬಾರಿ ಒಂದೇ ನಿರ್ಧಾರಕ್ಕೆ ಬರೋಣ ಎಂದು ಸಲಹೆ ನೀಡುತ್ತಾರೆ. ನಮ್ಮ ಕನಸು, ನಮ್ಮ ಗುರಿ ಏನೇ ಇರಲಿ, ಅದನ್ನು ಸಾಧಿಸಲು ಮೂರು ಮುಖ್ಯ ವಿಚಾರಗಳನ್ನು ಪಾಲಿಸಬೇಕು ಎನ್ನುತ್ತಾರೆ.
ಮೊದಲನೆಯದಾಗಿ, ನಮ್ಮ ಗುರಿಯ ಬಗ್ಗೆ ದೃಢವಾದ ಮನಸ್ಸು ಮಾಡಬೇಕು. ಎರಡನೆಯದಾಗಿ, ಮನಸ್ಸು ಮಾಡಿದ್ದನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕು. ಮೂರನೆಯದಾಗಿ, ಆರಂಭಿಸಿದ ಕೆಲಸವನ್ನು ಆ ವರ್ಷದೊಳಗೆ ಶಿಸ್ತಿನಿಂದ, ಅಚ್ಚುಕಟ್ಟಾಗಿ ಮುಗಿಸಬೇಕು. ಈ ಮೂರು ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಯಶಸ್ಸು ಖಂಡಿತವಾಗಿಯೂ ನಮ್ಮದಾಗುತ್ತದೆ ಎನ್ನುವುದು ಅವರ ನಂಬಿಕೆ.
ರಮೇಶ್ ಅರವಿಂದ್ ಅವರ ಈ ಸರಳ ಆದರೆ ಆಳವಾದ ಮಾತುಗಳು ಪ್ರತಿಯೊಬ್ಬರಿಗೂ ಹೊಸ ಉತ್ಸಾಹ, ಹೊಸ ಆಶಾವಾದವನ್ನು ನೀಡುತ್ತವೆ. ಹೊಸ ವರ್ಷದಲ್ಲಿ ಗುರಿಗಳನ್ನು ಸಾಧಿಸಲು ಇದು ನಿಜಕ್ಕೂ ಸ್ಪೂರ್ತಿದಾಯಕ ಸಂದೇಶವಾಗಿದೆ.






