ಆಸ್ಪತ್ರೆಗೆ ಹೋದಾಗ ಬಿಳಿ ಕೋಟ್ ಧರಿಸಿದ ವೈದ್ಯರು ಕಾಣಿಸಿದರೆ, ನ್ಯಾಯಾಲಯದಲ್ಲಿ ಕಪ್ಪು ಕೋಟ್ನಲ್ಲಿ ಗಂಭೀರವಾಗಿ ಕಾಣಿಸುವ ವಕೀಲರು ನಮ್ಮ ಗಮನ ಸೆಳೆಯುತ್ತಾರೆ. ಇದು ಕೇವಲ ಉಡುಪು ಅಥವಾ ಫ್ಯಾಷನ್ ಅಲ್ಲ; ಈ ಬಣ್ಣಗಳ ಹಿಂದೆ ಶತಮಾನಗಳಿಂದ ಬೆಳೆದು ಬಂದ ಸಂಪ್ರದಾಯ, ವೈಜ್ಞಾನಿಕ ಕಾರಣಗಳು ಮತ್ತು ಆಳವಾದ ಸಾಂಕೇತಿಕ ಅರ್ಥಗಳಿವೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯದ ಕುರಿತ ಮಾಹಿತಿ ವೇಗವಾಗಿ ಹರಡುತ್ತಿದ್ದು, ಜನರಲ್ಲಿ ಕುತೂಹಲ ಹೆಚ್ಚಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸ್ವಚ್ಛತೆಯೇ ಅತಿ ಮುಖ್ಯ. ಬಿಳಿ ಬಣ್ಣದಲ್ಲಿ ಸಣ್ಣ ಕಲೆ ಅಥವಾ ಅಶುದ್ಧತೆ ಕೂಡ ತಕ್ಷಣ ಕಾಣಿಸಿಕೊಳ್ಳುತ್ತದೆ, ಇದರಿಂದ ವೈದ್ಯರು ತಮ್ಮ ಉಡುಪು ಮತ್ತು ಪರಿಸರವನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಲು ಎಚ್ಚರ ವಹಿಸುತ್ತಾರೆ.
ಇದನ್ನು ಓದಿ: ಹನಿ ಟ್ರ್ಯಾಪ್ ಜಾಲ…ಬೆಡ್ರೂಮಿನಲ್ಲಿ ಗುಪ್ತ ಕ್ಯಾಮೆರಾ, 50ಕ್ಕೂ ಹೆಚ್ಚು ಮಂದಿಯನ್ನು ಪತ್ನಿಯೊಂದಿಗೆ ಬಲೆಗೆ ಬೀಳಿಸಿದ ಪತಿ!!!
ಬಿಳಿ ಬಣ್ಣವು ಶುದ್ಧತೆ, ಶಾಂತಿ ಮತ್ತು ವಿಶ್ವಾಸದ ಸಂಕೇತವಾಗಿದ್ದು, ಆಸ್ಪತ್ರೆಗಾಗಮಿಸುವ ರೋಗಿಗಳಲ್ಲಿ ಧೈರ್ಯ ಮತ್ತು ಧನಾತ್ಮಕ ಭಾವನೆ ಮೂಡಿಸುತ್ತದೆ. ವಿಜ್ಞಾನಾತ್ಮಕವಾಗಿ ನೋಡಿದರೆ, ಬಿಳಿ ಬಣ್ಣ ಬೆಳಕನ್ನು ಪ್ರತಿಫಲಿಸಿ ಶಾಖವನ್ನು ಕಡಿಮೆ ಹೀರಿಕೊಳ್ಳುತ್ತದೆ; ಇದರಿಂದ ಒತ್ತಡದ ಕೆಲಸ ಮಾಡುವ ವೈದ್ಯರಿಗೆ ದೇಹದ ತಾಪಮಾನ ಸಮತೋಲನದಲ್ಲಿರಲು ಸಹಕಾರಿಯಾಗುತ್ತದೆ.
19ನೇ ಶತಮಾನದ ಕೊನೆಯವರೆಗೂ ವೈದ್ಯರು ಕಪ್ಪು ಬಟ್ಟೆ ಧರಿಸುತ್ತಿದ್ದರೆಂದೂ, ನಂತರ ವೈದ್ಯಕೀಯ ವಿಜ್ಞಾನ ಅಭಿವೃದ್ಧಿಯಾದಂತೆ ನೈರ್ಮಲ್ಯದ ಸಂಕೇತವಾಗಿ 20ನೇ ಶತಮಾನದ ಆರಂಭದಲ್ಲಿ ಬಿಳಿ ಕೋಟ್ ಬಳಕೆಗೆ ಬಂದಿತ್ತೆಂದೂ ಇತಿಹಾಸ ಹೇಳುತ್ತದೆ.
ನ್ಯಾಯಾಲಯದ ವಾತಾವರಣದಲ್ಲಿ ಕಪ್ಪು ಬಣ್ಣವು ಅಧಿಕಾರ, ಘನತೆ ಮತ್ತು ಶಿಸ್ತನ್ನು ಪ್ರತಿನಿಧಿಸುತ್ತದೆ. ವಕೀಲರ ವಾದವು ಭಾವನೆಗಿಂತ ಕಾನೂನು ಮತ್ತು ತರ್ಕದ ಮೇಲೆ ನಿಂತಿರಬೇಕು ಎಂಬ ಸಂದೇಶವನ್ನು ಕಪ್ಪು ಕೋಟ್ ನೀಡುತ್ತದೆ. ‘ನ್ಯಾಯ ದೇವತೆ ಕುರುಡು’ ಎಂಬ ಕಲ್ಪನೆಯಂತೆ, ನ್ಯಾಯದ ಮುಂದೆ ಎಲ್ಲರೂ ಸಮಾನರು ಎಂಬ ಅರ್ಥವನ್ನು ಕಪ್ಪು ಬಣ್ಣ ಒತ್ತಿ ಹೇಳುತ್ತದೆ. ಎದುರಾಳಿ ಯಾರು ಎಂಬುದಕ್ಕಿಂತ, ಸತ್ಯ ಮತ್ತು ಕಾನೂನು ಮುಖ್ಯ ಎಂಬ ತತ್ತ್ವವನ್ನು ಇದು ಸೂಚಿಸುತ್ತದೆ.
ಇತಿಹಾಸದ ಪ್ರಕಾರ, 17ನೇ ಶತಮಾನದಲ್ಲಿ ಬ್ರಿಟಿಷ್ ರಾಜ ಚಾರ್ಲ್ಸ್ II ಅವರ ನಿಧನದ ಬಳಿಕ ಶೋಕಾಚರಣೆಯ ಸಂಕೇತವಾಗಿ ಕಪ್ಪು ಬಟ್ಟೆ ಧರಿಸುವ ಪದ್ಧತಿ ಆರಂಭವಾಯಿತು; ಅದೇ ಸಂಪ್ರದಾಯ ಮುಂದುವರಿದು ವಕೀಲರ ಕಪ್ಪು ಕೋಟ್ ಅಲಿಖಿತ ನಿಯಮವಾಗಿ ಬೇರೂರಿತು.
ವಕೀಲರು ಕುತ್ತಿಗೆಯಲ್ಲಿ ಧರಿಸುವ ಎರಡು ಬಿಳಿ ಪಟ್ಟಿಗಳನ್ನು ‘ಟ್ಯಾಬ್ಸ್’ ಅಥವಾ ‘ನೆಕ್ಬ್ಯಾಂಡ್’ ಎಂದು ಕರೆಯಲಾಗುತ್ತದೆ.
ಇದು ಬ್ರಿಟಿಷ್ ನ್ಯಾಯಾಂಗ ಪರಂಪರೆಯಿಂದ ಬಂದಿರುವುದಾಗಿದ್ದು, ನ್ಯಾಯಾಲಯದ ಮೇಲೆ ವಕೀಲರು ಹೊಂದಿರುವ ನಿಷ್ಠೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಪ್ರತಿನಿಧಿಸುತ್ತದೆ. ಈ ಸಣ್ಣ ಬಿಳಿ ಪಟ್ಟಿಗಳು ವಕೀಲರು ವ್ಯಕ್ತಿಗಿಂತ ಕಾನೂನಿಗೆ ಬದ್ಧರಾಗಿದ್ದಾರೆ ಎಂಬ ಸಂದೇಶವನ್ನು ನೀಡುತ್ತವೆ.






