2026ರ ಆರಂಭದಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಒಂದು ಹಳೆಯ ವಿಡಿಯೋ ಮತ್ತೆ ಜನರ ಮನಸ್ಸು ಕದಲಿಸಿದೆ. ಬಿಳಿ ಮಂಜಿನ ನಡುವೆ ಒಂಟಿಯಾಗಿ ನಡೆಯುತ್ತಿರುವ ಪೆಂಗ್ವಿನ್ ದೃಶ್ಯ ಈಗ ವೈರಲ್ ಆಗಿ ಎಲ್ಲರಿಗೂ ಭಾವನಾತ್ಮಕ ಅನುಭವ ಕೊಟ್ಟಿದೆ. ನೆಟ್ಟಿಗರು ಇದನ್ನು ‘ನಿಹಿಲಿಸ್ಟ್ ಪೆಂಗ್ವಿನ್’ ಅಂತ ಕರೆಯುತ್ತಿದ್ದಾರೆ.
ಸರಳವಾಗಿ ಕಾಣಿಸುವ ಈ ದೃಶ್ಯದ ಹಿಂದೆ ಆಳವಾದ ತತ್ವಶಾಸ್ತ್ರ ಮತ್ತು ಮನಸಿಗೆ ತಾಕುವ ಕಥೆ ಅಡಗಿದೆ. ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಎಮೋಷನಲ್ ಮ್ಯೂಸಿಕ್ ಜೊತೆಗೆ ಈ ಕ್ಲಿಪ್ ಶೇರ್ ಆಗುತ್ತಾ, ಜನರನ್ನು ತಮ್ಮ ಜೀವನದ ಬಗ್ಗೆ ಯೋಚಿಸುವಂತೆ ಮಾಡುತ್ತಿದೆ.
ಸಾಮಾನ್ಯವಾಗಿ ಪೆಂಗ್ವಿನ್ಗಳು ಗುಂಪಾಗಿ ಬದುಕುತ್ತವೆ, ಹಸಿವಾದಾಗ ಸಮುದ್ರದ ಕಡೆ ಹೋಗಿ ಆಹಾರ ಹುಡುಕುತ್ತವೆ. ಆದರೆ ಈ ಪೆಂಗ್ವಿನ್ ಮಾತ್ರ ತನ್ನ ಕಾಲೋನಿಯ ಎಲ್ಲ ಸದಸ್ಯರು ಸಮುದ್ರದ ಕಡೆ ಹೆಜ್ಜೆ ಹಾಕಿದಾಗ, ಸಂಪೂರ್ಣ ವಿರೋಧ ದಿಕ್ಕಿನಲ್ಲಿ ನಡೆಯಲು ಶುರು ಮಾಡುತ್ತದೆ. ಜನರಿಲ್ಲದ, ಆಹಾರವಿಲ್ಲದ, ಬದುಕು ಸಾಧ್ಯವೇ ಇಲ್ಲದ ಐಸ್ ಬೆಟ್ಟಗಳ ಕಡೆಗೆ ಅದು ಒಂಟಿಯಾಗಿ ಸಾಗುತ್ತದೆ.
ಇದನ್ನು ಓದಿ: ಯಾವ ಬಾಟಲ್ ಅಲ್ಲಿ ನೀರು ಕುಡಿದರೆ ಸೂಕ್ತ ಇಲ್ಲಿದೆ ಸಂಪೂರ್ಣ ಮಾಹಿತಿ
ಇದು ದಾರಿ ತಪ್ಪಿದ ನಡಿಗೆ ಅಲ್ಲ, ಉದ್ದೇಶಪೂರ್ವಕವಾಗಿ ಆಯ್ದ ದಾರಿ ಅನ್ನೋದು ನೋಡಿದವರಿಗೆ ಅರ್ಥವಾಗುತ್ತದೆ. ಈ ದೃಶ್ಯ ಇತ್ತೀಚೆಗೆ ಶೂಟ್ ಮಾಡಿದದ್ದಲ್ಲ. 2007ರಲ್ಲಿ ಜರ್ಮನ್ ಡಾಕ್ಯುಮೆಂಟರಿ ನಿರ್ದೇಶಕ ವರ್ನರ್ ಹರ್ಜೋಗ್ ಅವರು ‘ಎನ್ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್’ ಸಿನಿಮಾದ ಒಂದು ಕ್ಷಣ ಇದು. ಶೂಟಿಂಗ್ ವೇಳೆ ಈ ಪೆಂಗ್ವಿನ್ನ ವರ್ತನೆ ನೋಡಿ ಹರ್ಜೋಗ್ ಕೂಡ ಅಚ್ಚರಿಗೊಳಗಾದರು. ಇದು ಗೊಂದಲದಲ್ಲಿ ಓಡುತ್ತಿಲ್ಲ, ಎಲ್ಲವನ್ನೂ ಬಿಟ್ಟು ದೂರ ಹೋಗಲು ನಿರ್ಧರಿಸಿದೆ ಅನ್ನೋದು ಅವರಿಗೆ ಸ್ಪಷ್ಟವಾಯಿತು.
ಆ ಪೆಂಗ್ವಿನ್ ಸಾಗಿದ ದಾರಿಯಲ್ಲಿ ಸುಮಾರು 70 ಕಿಲೋಮೀಟರ್ಗಳವರೆಗೆ ಏನೂ ಇಲ್ಲ. ಕೊನೆಗೆ ಎದುರಾಗೋದು ಸಾವು ಮಾತ್ರ. ಹರ್ಜೋಗ್ ಇದನ್ನು ‘ಡೆತ್ ಮಾರ್ಚ್’ ಅಂದ್ರೆ ಸಾವಿನ ಯಾತ್ರೆ ಅಂತ ವಿವರಿಸಿದರು. ಅದನ್ನು ತಡೆದು ವಾಪಸ್ ಕರೆತರಲು ಪ್ರಯತ್ನಿಸಿದರೂ, ಅದು ಮತ್ತೆ ಅದೇ ದಿಕ್ಕಿಗೆ ತಿರುಗಿ ನಡೆಯತೊಡಗಿತು. ಬದುಕುವ ಆಸೆಯನ್ನೇ ತ್ಯಜಿಸಿದಂತೆಯೇ ಅದರ ಹೆಜ್ಜೆಗಳು ಕಾಣುತ್ತವೆ.
2026ರಲ್ಲಿ ಈ ಕ್ಲಿಪ್ ಮತ್ತೆ ವೈರಲ್ ಆಗೋದಕ್ಕೆ ಕಾರಣ ಜನವರಿ ಮಧ್ಯದಲ್ಲಿ ಯಾರೋ ಇದಕ್ಕೆ ಶಕ್ತಿಶಾಲಿ ಆರ್ಗನ್ ಮ್ಯೂಸಿಕ್ ಸೇರಿಸಿ ಎಡಿಟ್ ಮಾಡಿದ್ದದ್ದು. ಆ ಸಂಗೀತ, ಪೆಂಗ್ವಿನ್ನ ನಿಧಾನ ನಡಿಗೆ ಮತ್ತು ಹರ್ಜೋಗ್ ಅವರ ಧ್ವನಿ ಸೇರಿ ಜನರಿಗೆ ಗಾಢವಾಗಿ ಕನೆಕ್ಟ್ ಆಯಿತು. ಕೆಲವೇ ದಿನಗಳಲ್ಲಿ ಲಕ್ಷಾಂತರ ಜನ ಈ ವಿಡಿಯೋ ನೋಡಿ ಭಾವೋದ್ರಿಕ್ತರಾದರು.
ಈ ಪೆಂಗ್ವಿನ್ನಲ್ಲಿ ಜನರು ತಮ್ಮದೇ ಪ್ರತಿಬಿಂಬವನ್ನು ಕಾಣುತ್ತಿದ್ದಾರೆ. ಇಂದಿನ ಜೀವನದಲ್ಲೂ ನಮಗೆ ಅನೇಕ ಬಾರಿ ಸುಸ್ತು, ಬೇಸರ, ಬರ್ನೌಟ್ ಆಗುತ್ತೆ. ದಿನದಿನಕ್ಕೂ ಅದೇ ರೂಟೀನ್, ಸಮಾಜ ಹಾಕಿದ ಗಡಿ ದಾಟಲು ಆಗದ ಅಸಹನೆ. “ಎಲ್ಲಾ ಬಿಟ್ಟು ಎಲ್ಲಾದ್ರೂ ದೂರ ಹೋಗ್ಬೇಕು” ಅನ್ನೋ ಭಾವನೆ ನಮ್ಮೊಳಗೆ ಹುಟ್ಟಿದಾಗ, ಈ ಪೆಂಗ್ವಿನ್ ಅದಕ್ಕೆ ಪ್ರತೀಕವಾಗಿ ಕಾಣಿಸುತ್ತದೆ.
ನಿಹಿಲಿಸಂ ಅಂದ್ರೆ ಬದುಕಿಗೆ ನಿರ್ದಿಷ್ಟ ಅರ್ಥವೇ ಇಲ್ಲ ಅನ್ನೋ ನಂಬಿಕೆ. ಈ ಪೆಂಗ್ವಿನ್ ಕೂಡ ಬದುಕು, ಆಹಾರ, ಸಂಗಾತಿ ಎಲ್ಲವನ್ನೂ ಬಿಟ್ಟು ಶೂನ್ಯತೆಯ ಕಡೆಗೆ ಸಾಗಿದಂತೆ ತೋರುತ್ತದೆ. ಇದು ಸೋಲಿನ ಕಥೆ ಅಲ್ಲ, “ನನ್ನ ದಾರಿಯನ್ನು ನಾನೇ ಆಯ್ಕೆ ಮಾಡ್ತೀನಿ, ಅದರ ಅಂತ್ಯ ಏನೇ ಆದ್ರೂ ಪರವಾಗಿಲ್ಲ” ಅನ್ನೋ ಹಠದ ಸಂಕೇತ.
ಸಾವಿರಾರು ಜನರ ನಡುವೆ ಇದ್ದರೂ ಒಂಟಿತನ ಅನುಭವಿಸುವ ಭಾವನೆ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ತೋರುತ್ತದೆ. ಗುಂಪಿನ ಜೊತೆ ಹೋಗದೇ, ಅಪಾಯ ಇದ್ದರೂ ನನ್ನ ದಾರಿಯಲ್ಲಿ ನಾನು ಸಾಗ್ತೀನಿ ಅನ್ನೋ ಮನಸ್ಥಿತಿ ಇದರಲ್ಲಿ ಇದೆ. ಆ ಪೆಂಗ್ವಿನ್ ಬದುಕಿರಲಿಕ್ಕಿಲ್ಲ, ಆದರೆ ಅದರ ನಡಿಗೆ ಕೋಟ್ಯಂತರ ಜನರಿಗೆ ಹೊಸ ಅರ್ಥ ಕೊಟ್ಟಿದೆ.
ಇದು ಕೇವಲ ಒಂದು ಪ್ರಾಣಿಯ ವಿಡಿಯೋ ಅಲ್ಲ. ಜಗತ್ತು ನಿನ್ನ ಬಗ್ಗೆ ಏನು ಯೋಚಿಸಿದ್ರೂ, ನಿನಗೆ ಸರಿ ಅನಿಸಿದ ದಾರಿಯಲ್ಲಿ ನಡೆ ಅನ್ನೋ ಸಂದೇಶ ಇದರಲ್ಲಿ ಅಡಗಿದೆ. ಆ ದಾರಿ ಅಂತಿಮವಾಗಿ ಯಾವತ್ತಿಗೆ ಕರೆದೊಯ್ಯುತ್ತದೋ ಗೊತ್ತಿಲ್ಲದಿದ್ದರೂ, ಆಯ್ಕೆ ನಮ್ಮದೇ ಇರಬೇಕು ಅನ್ನೋದನ್ನ ಈ ನಿಹಿಲಿಸ್ಟ್ ಪೆಂಗ್ವಿನ್ ಕಥೆ ಹೇಳುತ್ತದೆ.






