ದುಬೈ ಏರ್‌ಶೋ ವೇಳೆ ಶುಕ್ರವಾರ ಸಂಭವಿಸಿದ ತೇಜಸ್ ಯುದ್ಧ ವಿಮಾನದ ದುರಂತದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಅವರ ಪಾರ್ಥೀವ ಶರೀರವನ್ನು ಸ್ವದೇಶಕ್ಕೆ ತರಲಾಗಿದ್ದು, ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ದುಃಖದ ವಾತಾವರಣ ಆವರಿಸಿತು. ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಸೇರಿ ಅಂತಿಮ ನೋಟ ವೀಕ್ಷಿಸಿದರು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ವತಿಯಿಂದ ಗೌರವಪೂರ್ವಕ ನಮನ ಸಲ್ಲಿಸಲಾಯಿತು.
ಅಂತಿಮ ಸಂಸ್ಕಾರ
ಶುಕ್ರವಾರ (ನ.21) ನಡೆದ ಈ ದುರಂತದಲ್ಲಿ ನಮಾಂಶ್ ಸ್ಯಾಲ್ ಮೃತಪಟ್ಟಿದ್ದು, ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಐಎಎಫ್ ವಿಶೇಷ ತನಿಖಾ ಸಮಿತಿಯನ್ನು ರಚಿಸಿದೆ.
2014ರಲ್ಲಿ ವಿಂಗ್ ಕಮಾಂಡರ್ ನಮಾಂಶ್ ಅವರು ಅಫ್ಸಾನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಏಳು ವರ್ಷದ ಮಗಳು ಇದ್ದಾಳೆ. ತಾನೂ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಆಗಿರುವ ಅಫ್ಸಾನ್ ಅವರು ಕುಟುಂಬದವರೊಂದಿಗೆ ನಿಂತು ಪತಿಗೆ ಕೊನೆಯ ನಮನ ಸಲ್ಲಿಸಿದರು. ಕಣ್ಣೀರಿನಿಂದ ‘ಸೆಲ್ಯೂಟ್’ ಮಾಡಿದ ಕ್ಷಣ ಎಲ್ಲರನ್ನೂ ಎದೆಮುರಿಯುವಂತೆ ಮಾಡಿತು. ವಾಯುಪಡೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಸರ್ಕಾರದ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಐಎಎಫ್ ಟ್ವೀಟ್‌ನಲ್ಲಿ ಏನು ಹೇಳಿದೆ?
“ಅಚಲ ಬದ್ಧತೆ, ಅಪರೂಪದ ನೈಪುಣ್ಯ ಮತ್ತು ಕರ್ತವ್ಯನಿಷ್ಠೆ ಹೊಂದಿದ್ದ ಒಂದು ಶ್ರೇಷ್ಠ ಯೋಧ ಪೈಲಟ್‌ನ್ನು ನಾವು ಕಳೆದುಕೊಂಡಿದ್ದೇವೆ. ಈ ದುಃಖದ ಕ್ಷಣದಲ್ಲಿ ನಾವು ಅವರ ಕುಟುಂಬದೊಂದಿಗೆ ನಿಂತಿದ್ದೇವೆ. ಅವರ ಧೈರ್ಯ ಮತ್ತು ತ್ಯಾಗ ಸದಾ ಸ್ಮರಣೀಯ,” ಎಂದು ಭಾರತೀಯ ವಾಯುಪಡೆ ಎಕ್ಸ್‌ನಲ್ಲಿ (ಟ್ವೀಟರ್) ಪ್ರಕಟಿಸಿದೆ.
ಘಟನೆಯ ವಿವರ ಏನು?
ದುಬೈನ ಅಲ್ ಮಕ್ತೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ ತೇಜಸ್ ಯುದ್ಧ ವಿಮಾನ ಕಡಿಮೆ ಎತ್ತರದ ಪ್ರದರ್ಶನ ಹಾರಾಟ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಬಿದ್ದಿದೆ. ದೃಶ್ಯಾವಳಿಗಳ ಪ್ರಕಾರ ವಿಮಾನ ತಕ್ಷಣವೇ ಎತ್ತರ ಕಳೆದುಕೊಂಡು ನೋಸ್ ಡೈವ್ ಆಗಿ ಭೂಮಿಗೆ ಅಪ್ಪಳಿಸಿದೆ. ಆಘಾತದ ಕೆಲವೇ ಕ್ಷಣಗಳಲ್ಲಿ ಬೆಂಕಿ ಸ್ಫೋಟಗೊಂಡಿದ್ದು, ಕಪ್ಪು ಹೊಗೆ ಪ್ರದೇಶವನ್ನು ಆವರಿಸಿತು. ಸುಮಾರು 50 ಸೆಕೆಂಡ್ ಇರುವ ದೃಶ್ಯದಲ್ಲಿ ಪ್ಯಾರಾಶೂಟ್‌ನಂತಹ ವಸ್ತು ಕ್ಷಣಕಾಲ ಕಾಣಿಸಿಕೊಂಡಿದ್ದರೂ, ಕಡಿಮೆ ಎತ್ತರದ ಕಾರಣದಿಂದ ವಿಂಗ್ ಕಮಾಂಡರ್ ಸ್ಯಾಲ್ ವಿಮಾನದಿಂದ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗಲಿಲ್ಲವೆಂದು ಶಂಕಿಸಲಾಗಿದೆ.
ತೇಜಸ್ ಅಪಘಾತದ ಬಳಿಕ ಪೈಲಟ್‌ಗೆ ಅಂತಿಮ ಗೌರವ, ಸಮವಸ್ತ್ರ ತೊಟ್ಟ ಪತ್ನಿಯ ಕಣ್ಣೀರಿನ ವಿದಾಯ..
By krutika naik
On: November 24, 2025 10:13 AM
---Advertisement---






