ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕರ್ತವ್ಯದಲ್ಲಿದ್ದ ಶಿಕ್ಷಕರೊಬ್ಬರು ಶಾಲಾ ಕೊಠಡಿಯೊಳಗೇ ಆತ್ಮಹತ್ಯೆಗೆ ಶರಣಾಗಿರುವುದು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಶಾಲೆಯಂತಹ ಪವಿತ್ರ ವಾತಾವರಣದಲ್ಲೇ ಈ ದುರಂತ ಸಂಭವಿಸಿರುವುದು ಗ್ರಾಮಸ್ಥರನ್ನು ಮರ್ಮಘಾತಗೊಳಿಸಿದೆ.
ಇದನ್ನು ಓದಿ: ತೀರ್ಥಹಳ್ಳಿ: ಬಸ್-ಕಾರು ಮುಖಾಮುಖಿ ಅಪಘಾತ, ಒಂದೇ ಕುಟುಂಬದ ನಾಲ್ವರು ಸಾವು..!!
ಇದನ್ನು ಓದಿ: ಹೃದಯಾಘಾತದಿಂದ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ನಿಧನ
ಶಿಕಾರಿಪುರ ತಾಲ್ಲೂಕಿನ ಜೀನಹಳ್ಳಿ ಗ್ರಾಮದ ಮೂಲದವರು ಹಾಗೂ ಪ್ರಸ್ತುತ ಹೊನ್ನಾಳಿಯಲ್ಲಿ ನೆಲೆಸಿದ್ದ ಧನಂಜಯ (51) ಮೃತ ಶಿಕ್ಷಕ ಎಂದು ಗುರುತಿಸಲಾಗಿದೆ. ಅವರು ದಿನನಿತ್ಯದಂತೆ ಬೆಳಿಗ್ಗೆ ಶಾಲೆಗೆ ಹಾಜರಾಗಿದ್ದರು. ಶಾಲೆಗೆ ಬರುವ ಮೊದಲು ಗ್ರಾಮದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಪೂರ್ಣಗೊಳಿಸಿ ಬಳಿಕ ಶಾಲೆಗೆ ಆಗಮಿಸಿದ್ದರು.
ನಂತರ ವಿದ್ಯಾರ್ಥಿಗಳಿಗೆ ಪಾಠವನ್ನೂ ಮಾಡಿದ್ದು, ಯಾವುದೇ ಅಸಾಮಾನ್ಯ ವರ್ತನೆ ಕಂಡುಬಂದಿರಲಿಲ್ಲ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಮಧ್ಯಾಹ್ನದ ವಿರಾಮದ ಸಮಯದಲ್ಲಿ, ತರಗತಿಯಲ್ಲಿದ್ದ ಮಕ್ಕಳನ್ನು ಹೊರಗೆ ಕಳುಹಿಸಿದ ಅವರು, ಕೆಲವು ದಾಖಲೆ ಕೆಲಸವಿದೆ ಎಂದು ಹೇಳಿ ಕೊಠಡಿಯ ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿಕೊಂಡಿದ್ದಾರೆ.
ಸಾಕಷ್ಟು ಸಮಯ ಕಳೆದರೂ ಶಿಕ್ಷಕರು ಹೊರಬರದ ಕಾರಣ ಸಹ ಶಿಕ್ಷಕರಿಗೆ ಅನುಮಾನ ಉಂಟಾಗಿದೆ. ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಕಿಟಕಿಯಿಂದ ಒಳಗೆ ನೋಡಿದಾಗ ಭಯಾನಕ ದೃಶ್ಯ ಕಂಡುಬಂದಿದೆ. ಕೂಡಲೇ ಗ್ರಾಮಸ್ಥರು ಹಾಗೂ ಶಿಕ್ಷಕರು ಸೇರಿ ಬಾಗಿಲು ಒಡೆದು ಒಳಗೆ ಪ್ರವೇಶಿಸಿ ಅವರನ್ನು ಕೆಳಗಿಳಿಸಿ ಪ್ರಾಣ ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.
ಈ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶಾಲೆಗೆ ಬಂದಾಗ ಧನಂಜಯ ಅವರು ಸಂಪೂರ್ಣ ಸಹಜವಾಗಿಯೇ ಇದ್ದರು ಎಂದು ಸಹೋದ್ಯೋಗಿಗಳು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಶಾಲಾ ಆವರಣದಲ್ಲೇ ನಡೆದ ಈ ದುರ್ಘಟನೆಯಿಂದ ಮಕ್ಕಳು ಭಯಗೊಂಡಿದ್ದು, ಗ್ರಾಮದೆಲ್ಲೆಡೆ ದುಃಖದ ವಾತಾವರಣ ಆವರಿಸಿದೆ.







1 thought on “SHIVMOGGA: ಶಾಲಾ ಕೊಠಡಿಯಲ್ಲೇ ಶಿಕ್ಷಕರ ಆತ್ಮಹತ್ಯೆ; ಶಿಕಾರಿಪುರ ಬಳೂರು ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆ..!!!!”