ಕಲಬುರಗಿ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದಲ್ಲಿರುವ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದಲ್ಲಿ ನಡೆದ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಠದ ಆವರಣದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ತಮ್ಮ ಹಾಜರಾತಿಗೆ ‘ಬಿಲ್ಡಪ್’ ನೀಡಿದ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಕಳೆದ ಎಂಟು ತಿಂಗಳುಗಳಿಂದ ಮಠವನ್ನು ತೊರೆದು ಕಾಣೆಯಾಗಿದ್ದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಒಂದು ವಾರದ ಹಿಂದೆ ಅಚ್ಚರಿಯಾಗಿ ಮಠಕ್ಕೆ ವಾಪಸ್ಸಾಗಿದ್ದರು. ಈ ಅವಧಿಯಲ್ಲಿ ಮಠಕ್ಕೆ ಹೊಸ ಪೀಠಾಧಿಪತಿ ನೇಮಕ ಕುರಿತು ಗ್ರಾಮಸ್ಥರು ಹಾಗೂ ಭಕ್ತರಲ್ಲಿ ಚರ್ಚೆಗಳು ನಡೆಯುತ್ತಿದ್ದು, ಅದೇ ವೇಳೆಯಲ್ಲಿ ಸ್ವಾಮೀಜಿಯ ವಾಪಸ್ಸು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸ್ವಾಮೀಜಿ ಮಠದ ಆವರಣದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ ವರ್ತನೆ, ತಮ್ಮ ವಿರೋಧಿಗಳಿಗೆ ಸಂದೇಶ ನೀಡುವ ಉದ್ದೇಶದಿಂದ ನಡೆದ ಪ್ರದರ್ಶನವೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ತಮ್ಮ ವಿರುದ್ಧ ಮಾತನಾಡುತ್ತಿರುವವರನ್ನು ಹೆದರಿಸಲು ಅಥವಾ ತಮ್ಮ ಪ್ರಭಾವವನ್ನು ತೋರಿಸಲು ಈ ರೀತಿ ನಡೆದುಕೊಂಡರಾ ಎಂಬ ಅನುಮಾನಗಳನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಹೇಳಿಕೆಯಂತೆ, ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣದಿಂದ ಕೆಲ ತಿಂಗಳುಗಳ ಹಿಂದೆ ಗ್ರಾಮಸ್ಥರು ಅವರನ್ನು ಮಠದಿಂದ ಹೊರಹಾಕಿದ್ದರು. ಕುಡಿದು ರಂಪಾಟ ನಡೆಸುತ್ತಿದ್ದ ವರ್ತನೆಯಿಂದ ಮಠದ ಗೌರವಕ್ಕೆ ಧಕ್ಕೆ ಉಂಟಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲೇ ಸ್ವಾಮೀಜಿ ಮಠ ತೊರೆದು ತೆರಳಿದ್ದು, ಎಂಟು ತಿಂಗಳ ಕಾಲ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಇತ್ತೀಚೆಗೆ ಮಠಕ್ಕೆ ಹೊಸ ಪೀಠಾಧಿಪತಿ ನೇಮಕ ಮಾಡುವ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲಿ ಸ್ವಾಮೀಜಿ ಮಠಕ್ಕೆ ಮರಳಿ ಬಂದು ಈ ರೀತಿಯ ಅಸ್ತ್ರ ಪ್ರದರ್ಶನ ನಡೆಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮಠದ ಹಕ್ಕು ಹಾಗೂ ಸ್ಥಾನ ಉಳಿಸಿಕೊಳ್ಳಲು ಅಥವಾ ವಿರೋಧಿಗಳನ್ನು ಬೆದರಿಸಲು ಈ ಕ್ರಮ ಕೈಗೊಂಡಿರಬಹುದೆಂಬ ಮಾತುಗಳು ಹರಿದಾಡುತ್ತಿವೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧಾರ್ಮಿಕ ಸಂಸ್ಥೆಯ ಪೀಠಾಧಿಪತಿಯೊಬ್ಬರು ಈ ರೀತಿಯ ವರ್ತನೆ ತೋರಿರುವುದು ಖಂಡನೀಯ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದ್ದು, ಮಠದ ಶಾಂತಿ ಹಾಗೂ ಭಕ್ತರ ಸುರಕ್ಷತೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಿದೆ.






