ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಮೂಢನಂಬಿಕೆಗಳ ಅಂಧಕಾರ ಇನ್ನೂ ಸಮಾಜದಲ್ಲಿ ಜೀವಂತವಾಗಿರುವುದಕ್ಕೆ ಕಲಬುರಗಿ ಮೂಲದ ಮಹಿಳೆಯೊಬ್ಬರ ದಾರುಣ ಸಾವು ಸಾಕ್ಷಿಯಾಗಿದೆ. ದೆವ್ವ ಹಿಡಿದಿದೆ ಎಂಬ ಅಸಂಬದ್ಧ ನಂಬಿಕೆಯ ಹೆಸರಿನಲ್ಲಿ ಮಹಿಳೆಯನ್ನು ಬೇವಿನ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮುರುಮ್ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ವೆಂಕಟೇಶ್ವರ ನಗರ ನಿವಾಸಿ ಮುಕ್ತಬಾಯಿ ಎಂದು ಗುರುತಿಸಲಾಗಿದೆ. ಸುಮಾರು ಆರು ವರ್ಷಗಳ ಹಿಂದೆ ಮುಕ್ತಬಾಯಿಗೆ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬುವನೊಂದಿಗೆ ವಿವಾಹವಾಗಿತ್ತು. ದಂಪತಿಗೆ ಐದು ವರ್ಷದ ಗಂಡು ಮಗನೂ ಇದ್ದನು. ಇತ್ತೀಚಿನ ದಿನಗಳಲ್ಲಿ ಮುಕ್ತಬಾಯಿಗೆ ದೆವ್ವ ಹಿಡಿದಿದೆ ಎಂಬ ಆರೋಪ ಮಾಡಿದ್ದ ಗಂಡನ ಕುಟುಂಬಸ್ಥರು ಆಕೆಯನ್ನು ನಿರಂತರವಾಗಿ ಹಿಂಸಿಸುತ್ತಿದ್ದರೆಂದು ತಿಳಿದುಬಂದಿದೆ.
ಐದು ವರ್ಷದ ಮಗನ ಎದುರಲ್ಲೇ ಹಲ್ಲೆ
ಮೃತಳ ತಾಯಿ ತಿಪ್ಪವ್ವ ಮಾತನಾಡಿ, “ನನ್ನ ಮಗಳಿಗೆ ಯಾವುದೇ ದೆವ್ವ ಹಿಡಿದಿರಲಿಲ್ಲ. ಅವಳನ್ನು ಹಿಂಸಿಸಬೇಡಿ ಎಂದು ಹಲವು ಬಾರಿ ಮನವಿ ಮಾಡಿದ್ದರೂ ಯಾರೂ ಕೇಳಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ, ಐದು ವರ್ಷದ ಮಗನ ಎದುರಲ್ಲೇ ಮುಕ್ತಬಾಯಿಯ ಮೇಲೆ ಬೇವಿನ ಕಟ್ಟಿಗೆಯಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ, ನದಿ ಸ್ನಾನ ಮಾಡಿಸಲಾಗಿದ್ದು, ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮುಕ್ತಬಾಯಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೂಢನಂಬಿಕೆಯ ಹೆಸರಿನ ನೇರ ಕೊಲೆ: ಕುಟುಂಬಸ್ಥರ ಆರೋಪ
ಮೃತಳ ಸಹೋದರಿ ಶ್ರೀದೇವಿ, ಇದು ಮೂಢನಂಬಿಕೆಯ ಹೆಸರಿನಲ್ಲಿ ನಡೆದ ನೇರ ಕೊಲೆ ಎಂದು ಆರೋಪಿಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಪ್ರಕರಣ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್ಐಆರ್ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಮಹಾರಾಷ್ಟ್ರದ ಮುರುಮ್ ಠಾಣೆ ಪೊಲೀಸರಿಗೆ ವರ್ಗಾಯಿಸಲಾಗಿದೆ.






