ಟಿ20 ವಿಶ್ವಕಪ್ನಲ್ಲಿ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಕೇವಲ ಎರಡು ಓವರ್ ಮಾತ್ರ ನೀಡಿದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರ ನಿರ್ಧಾರಕ್ಕೆ ಮಾಜಿ ಆಟಗಾರ ಹಾಗೂ ಮಾಜಿ ಮುಖ್ಯ ಆಯ್ಕೆದಾರ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, ವರುಣ್ಗೆ ಐದು ವಿಕೆಟ್ ಪಡೆಯುವ ದೊಡ್ಡ ಅವಕಾಶವನ್ನು ತಂಡದ ಮ್ಯಾನೇಜ್ಮೆಂಟ್ ಕೈಚೆಲ್ಲಿದೆ ಎಂದು ಹೇಳಿದ್ದಾರೆ.
ವರುಣ್ ಚಕ್ರವರ್ತಿ ಎರಡು ಓವರ್ಗಳಲ್ಲಿ ಕೇವಲ 7 ರನ್ ನೀಡಿ 3 ವಿಕೆಟ್ ಪಡೆದು ನಮೀಬಿಯಾ ಬ್ಯಾಟಿಂಗ್ ಕ್ರಮಕ್ಕೆ ದೊಡ್ಡ ಹೊಡೆತ ನೀಡಿದ್ದರು. ಆದರೂ ಅವರಿಗೆ ಪೂರ್ಣ ಕೋಟಾದ ನಾಲ್ಕು ಓವರ್ಗಳನ್ನು ನೀಡದಿರುವುದನ್ನು ಶ್ರೀಕಾಂತ್ ಪ್ರಶ್ನಿಸಿದ್ದಾರೆ. “ಬೌಲರ್ನ್ನು ರಕ್ಷಿಸಬೇಕು, ಬೇರೆ ತಂಡಗಳಿಗೆ ಎಕ್ಸ್ಪೋಸ್ ಮಾಡಬಾರದು ಎಂಬುದು ಅರ್ಥಹೀನ ವಾದ. ಹಾಗಿದ್ದರೆ ಅವನನ್ನು ರೂಮ್ನಲ್ಲಿ ಲಾಕ್ ಮಾಡಿ ಇಡಬೇಕಿತ್ತು. ವಿಶ್ವಕಪ್ನಲ್ಲಿ ಐದು ವಿಕೆಟ್ ಪಡೆಯುವುದು ಸಣ್ಣ ಸಾಧನೆ ಅಲ್ಲ. ಇನ್ನೂ ಎರಡು ಓವರ್ ಕೊಟ್ಟಿದ್ದರೆ, ಅವನು ನಮೀಬಿಯಾವನ್ನು ಆಲೌಟ್ ಮಾಡುತ್ತಿದ್ದ,” ಎಂದು ಕಿಡಿಕಾರಿದ್ದಾರೆ.
ಇದಲ್ಲದೆ, ಪವರ್ಪ್ಲೇ ಓವರ್ಗಳಲ್ಲಿ ಜಸ್ಪ್ರೀತ್ ಬುಮ್ರಾಗೆ ಬೌಲಿಂಗ್ ನೀಡದ ನಿರ್ಧಾರವನ್ನೂ ಶ್ರೀಕಾಂತ್ ಟೀಕಿಸಿದ್ದಾರೆ. ನಮೀಬಿಯಾ ಪವರ್ಪ್ಲೇನಲ್ಲಿ 57 ರನ್ ಗಳಿಸಿದರೂ, ಬುಮ್ರಾಗೆ ಏಳನೇ ಓವರ್ನಲ್ಲಿ ಮಾತ್ರ ಬೌಲಿಂಗ್ ನೀಡಲಾಗಿದೆ. “ಬುಮ್ರಾನ್ನು ಯಾಕೆ ಆರಂಭದಲ್ಲೇ ಬಳಸಲಿಲ್ಲ? ಪವರ್ಪ್ಲೇ ನಂತರ ಬೌಲಿಂಗ್ಗೆ ತರೋದು ಯುಕ್ತಿಯುತವೇ? ಆರಂಭದಲ್ಲೇ ಬೌಲಿಂಗ್ ಮಾಡಿಸಿದ್ದರೆ ಪಂದ್ಯ ಬೇಗ ತೀರ್ಮಾನವಾಗುತ್ತಿತ್ತು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪಂದ್ಯದಲ್ಲಿ ಬುಮ್ರಾ ನಾಲ್ಕು ಓವರ್ಗಳಲ್ಲಿ 20 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಭಾರತ ಸುಲಭ ಜಯ ಸಾಧಿಸಿದರೂ, ಇಂತಹ ತಾಂತ್ರಿಕ ತಪ್ಪುಗಳು ಬಲಿಷ್ಠ ತಂಡಗಳ ವಿರುದ್ಧ ದುಬಾರಿಯಾಗಬಹುದು ಎಂದು ಶ್ರೀಕಾಂತ್ ಎಚ್ಚರಿಸಿದ್ದಾರೆ.
ಇದೀಗ ಫೆಬ್ರವರಿ 15ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಸೂಪರ್-8 ಹಂತದತ್ತ ದೊಡ್ಡ ಹೆಜ್ಜೆ ಇಡಲಿದೆ. ಏಷ್ಯಾಕಪ್ನಲ್ಲಿ ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಭಾರತ ಸಾಧಿಸಿದ ಜಯಗಳ ಬಳಿಕ, ಈ ಮುಖಾಮುಖಿ ಮತ್ತಷ್ಟು ರೋಚಕವಾಗಲಿದೆ. ಪಂದ್ಯಕ್ಕೆ ಸಂಬಂಧಿಸಿದ ಎಲ್ಲಾ ಟಿಕೆಟ್ಗಳು ಈಗಾಗಲೇ ಮಾರಾಟವಾಗಿದ್ದು, ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ.





