ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ‘ಮಗಳು ಕಾಣೆಯಾಗಿದ್ದಾರೆ’ ಎಂದು ಸುಳ್ಳು ಕಥೆ ಹೆಣೆದಿದ್ದ ಸುಜಾತಾ ಭಟ್ ಅವರನ್ನು ಇಂದು ಬೆಳಗ್ಗೆ ಎಸ್ಐಟಿ (ವಿಶೇಷ ತನಿಖಾ ತಂಡ) ವಿಚಾರಣೆಗಾಗಿ ಕಚೇರಿಗೆ ಕರೆಸಿಕೊಳ್ಳಲಾಗಿತ್ತು. ವಿಚಾರಣೆಯ ವೇಳೆ ಮಾಧ್ಯಮಗಳು ಅವರ ದೃಶ್ಯ ಚಿತ್ರೀಕರಿಸಲು ಮುಂದಾದಾಗ, ಕೋಪಗೊಂಡ ಸುಜಾತಾ ಭಟ್, “ನೀವೇನು ದೊಡ್ಡ ವಿಷಯ ಮಾಡೋಕೆ ಬಂದಿದ್ದೀರಾ? ನಿಮಗೆ ಬೇರೆ ಕೆಲಸ ಇಲ್ವಾ? ನಾನು ರಸ್ತೆಯ ಮಧ್ಯೆ ಬಟ್ಟೆ ಬಿಚ್ಚಿ ನಿಂತರೂ ಹಾಕ್ತೀರಾ?” ಎಂದು ಮಾಧ್ಯಮಗಳ ಮೇಲೆ ಗರಂ ಆಗಿ ಬೈದರು.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಸುಳ್ಳು ಸುದ್ದಿ ಹಬ್ಬಿಸಿದ್ದ. ಅದಕ್ಕೆ ಬೆಂಬಲವಾಗಿ ಸುಜಾತಾ ಭಟ್ ಕೂಡ ತಮ್ಮ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆಂದು ಸುಳ್ಳು ಆರೋಪ ಮಾಡಿದರು. ಈ ಹೇಳಿಕೆಗಳು ರಾಜ್ಯದ ಕಾನೂನು ವ್ಯವಸ್ಥೆಯನ್ನೇ ಗಂಭೀರವಾಗಿ ಸವಾಲು ಹಾಕಿದವು. ಸರ್ಕಾರವೂ ಈ ಹೇಳಿಕೆಗಳನ್ನು ನಂಬಿ, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಐಪಿಎಸ್ ಅಧಿಕಾರಿಗಳನ್ನೂ ಒಳಗೊಂಡಂತೆ ಎಸ್ಐಟಿ ರಚಿಸಿತ್ತು.
ತಿಮರೋಡಿ ಗ್ಯಾಂಗ್ ಮತ್ತು ಸುಜಾತಾ ಭಟ್, ಚಿನ್ನಯ್ಯ ಸೇರಿ ಜನರನ್ನು ತಪ್ಪು ದಾರಿಗೆಳೆದು ಕಾನೂನಿನ ಕಣ್ಣು ಮಸೆಯಲು ಪ್ರಯತ್ನಿಸಿದ್ದರೆಂಬ ಸತ್ಯ ಬಯಲಾಗಿತು. ಇದರಿಂದ ತನಿಖೆಯ ದಿಕ್ಕು ಬದಲಾಗಿದ್ದು, ಮೊದಲು ದೂರು ಕೊಟ್ಟವರನ್ನೇ ಆರೋಪಿಗಳನ್ನಾಗಿ ಪರಿಗಣಿಸಿ ವಿಚಾರಣೆ ಪ್ರಾರಂಭಿಸಲಾಯಿತು.
ಸುಜಾತಾ ಭಟ್ ಅವರು ಬೆಳಗ್ಗೆ 10.30ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ವಿಚಾರಣೆ ನಡೆದ ನಂತರ, ಅವರು ಊಟಕ್ಕೆ ತೆರಳಿ, ಮತ್ತೆ ಕಚೇರಿಗೆ ಹಿಂತಿರುಗಿ ವಿಚಾರಣೆಗೆ ಹಾಜರಾದರು. ಸಂಜೆ ಮನೆಗೆ ಹೊರಟಾಗ ಮಾಧ್ಯಮಗಳು ವಿಡಿಯೋ ಚಿತ್ರೀಕರಿಸುತ್ತಿದ್ದುದನ್ನು ನೋಡಿ ಮತ್ತೊಮ್ಮೆ ಕೋಪಗೊಂಡರು.
ಈ ಮಧ್ಯೆ, ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮಾ ಅವರು ತಿಮರೋಡಿ ಗ್ಯಾಂಗ್ನ ಪ್ರಮುಖ ಸದಸ್ಯರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು. ಆದರೆ, ಅವರು ನಿಗದಿತ ಸಮಯದಲ್ಲಿ ಹಾಜರಾಗದೆ ತನಿಖೆಗೆ ಸಹಕರಿಸದ ಕಾರಣ ಎಸ್ಐಟಿ ಕಾನೂನು ಕ್ರಮ ಕೈಗೊಳ್ಳುವ ಚಿಂತನೆ ನಡೆಸಿತು.
ಆದರೆ ಈ ಸಂದರ್ಭದಲ್ಲೇ ಆರೋಪಿಗಳ ಪರ ವಕೀಲ ಅಂಬಿಕಾ ಪ್ರಭು ಅವರು ತಂಡದ ಪರವಾಗಿ ಮನವಿ ಸಲ್ಲಿಸಿದರು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡ ಸೇರಿದಂತೆ ನಾಲ್ವರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ನೀಡುವಂತೆ ಅವರು ಕೇಳಿಕೊಂಡಿದ್ದಾರೆ. ಎಸ್ಐಟಿ ಈಗ ಈ ಮನವಿಯನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.






