ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಬಳಿ ಇರುವ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮಾನಂದ ಶ್ರೀ (49) ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ. ಇಂದು ಮುಂಜಾನೆ ಸುಮಾರು 3:40ರ ವೇಳೆಗೆ ಸ್ವಾಮೀಜಿ ಅಗಲಿದ ಸುದ್ದಿ ಲಭ್ಯವಾಗಿದೆ. ಎದೆನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಲಿಂಗಸೂಗೂರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆದರೆ ಮಾರ್ಗಮಧ್ಯೆಲೇ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಕೊಪ್ಪಳ: ನಾಳೆ ಬದುಕಿರ್ತಿನೋ ಇಲ್ವೋ ಎಂದು ರೀಲ್ಸ್ ಹಾಕಿದ್ದ ಸ್ವಾಮೀಜಿ ಮೃತ್ಯು!
ಇದನ್ನು ಓದಿ: ಮಗಳಿಗೆ ಮದುವೆ ನಿಶ್ಚಯವಾಗಿದೇ ಸ್ವಾಮಿ ಸುಟ್ಟ ಬಸ್ ಅವಶೇಷಗಳಲ್ಲಿ ಮಗಳನ್ನೇ ಹುಡುಕಿದ ತಂದೆ
ಸ್ವಾಮೀಜಿಗಳ ಅಂತ್ಯಕ್ರಿಯೆ ತಿಂಥಣಿಯ ಕನಕ ಗುರುಪೀಠದಲ್ಲೇ ಹಾಲುಮತ ಪದ್ಧತಿಯಂತೆ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಾನಂದ ಸ್ವಾಮೀಜಿ, ಮೂಲ ಹೆಸರು ಮೋಹನ್ ಪ್ರದಾನ, ಕಾಗಿನೆಲೆ ಕನಕ ಗುರುಪೀಠದ ಪ್ರಮುಖ ಹಾಗೂ ಪ್ರಭಾವಿ ಸ್ವಾಮೀಜಿಗಳಾಗಿ ಗುರುತಿಸಿಕೊಂಡಿದ್ದರು. ಸಮಾಜಸೇವೆ, ಸಾಹಿತ್ಯ ಕ್ಷೇತ್ರ ಮತ್ತು ಹಾಲುಮತ ಸಂಸ್ಕೃತಿಯ ಬೆಳವಣಿಗೆಯಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದರು. ಚಿತ್ರದುರ್ಗ ಮೂಲದವರಾದ ಇವರು ಜೈನ, ಕ್ರೈಸ್ತ ಹಾಗೂ ಬ್ರಹ್ಮಕುಮಾರಿ ಪಂಥಗಳ ಅಧ್ಯಯನದ ಪ್ರಭಾವವನ್ನು ಪಡೆದಿದ್ದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವರಾದ ಸ್ವಾಮೀಜಿ, ಮನೆ ತೊರೆದ ನಂತರ ವಿವಿಧ ಧರ್ಮಗಳು ಮತ್ತು ತತ್ವಶಾಸ್ತ್ರಗಳ ಕುರಿತು ಅಧ್ಯಯನ ನಡೆಸಿದರು. ನಂತರ ಕನಕಗುರು ಪೀಠವನ್ನು ಸ್ಥಾಪಿಸಿ, ಹಾಲುಮತ ಧರ್ಮದ ಸೇವೆಗೆ ತಮ್ಮ ಜೀವನವನ್ನು ಅರ್ಪಿಸಿದರು.
ಸಾಮೂಹಿಕ ವಿವಾಹ, ದಾಸೋಹ ಕಾರ್ಯಕ್ರಮಗಳು ಹಾಗೂ ಆರೋಗ್ಯ ಶಿಬಿರಗಳ ಮೂಲಕ ಸಮಾಜದ ನಾನಾ ವರ್ಗಗಳಿಗೆ ನೆರವಾಗುತ್ತಿದ್ದರು. ಅವರ ನಿಧನದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ದೊಡ್ಡ ನಷ್ಟ ಸಂಭವಿಸಿದೆ ಎಂದು ಭಕ್ತರು ಹಾಗೂ ಅನುಯಾಯಿಗಳು ಶೋಕ ವ್ಯಕ್ತಪಡಿಸಿದ್ದಾರೆ.






