ಬೆಂಗಳೂರುನಲ್ಲಿ ನಡೆದ ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಇದೀಗ ಹೃದಯವಿದ್ರಾವಕ ತಿರುವು ಪಡೆದುಕೊಂಡಿದೆ. ಗಾನವಿ ಸಾವಿನ ಬಳಿಕ ಆಕೆಯ ಪತಿ ಸೂರಜ್ ಮಹಾರಾಷ್ಟ್ರದ ನಾಗಪುರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಸೂರಜ್ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ನಾಗಪುರದ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇದೀಗ ಬೆಂಗಳೂರು–ನಾಗಪುರಕ್ಕೆ ಸಂಪರ್ಕ ಹೊಂದಿದ ದೊಡ್ಡ ಕುಟುಂಬ ದುರಂತವಾಗಿ ಮಾರ್ಪಟ್ಟಿದೆ. ಗಾನವಿ ಸಾವಿನ ನಂತರ ಆಕೆಯ ಕುಟುಂಬಸ್ಥರು ಸೂರಜ್ ಹಾಗೂ ಅವರ ಕುಟುಂಬದವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಈ ಆರೋಪಗಳು ಹಾಗೂ ಮಾನಸಿಕ ಒತ್ತಡದಿಂದ ಕುಗ್ಗಿಹೋದ ಸೂರಜ್, ತಮ್ಮ ತಾಯಿ ಜಯಂತಿ ಮತ್ತು ಸಹೋದರ ಸಂಜಯ್ ಜೊತೆ ನಾಗಪುರಕ್ಕೆ ತೆರಳಿದ್ದರು.
ನಾಗಪುರದಲ್ಲಿ ಏನಾಯಿತೋ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಲ್ಲಿಯೇ ಸೂರಜ್ ನೇಣು ಬಿಗಿದು ಪ್ರಾಣ ಬಿಟ್ಟಿದ್ದಾರೆ. ಈ ಬೆಳವಣಿಗೆಯಿಂದಾಗಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ತನಿಖೆ ಇದೀಗ ನಾಗಪುರಕ್ಕೂ ವಿಸ್ತರಿಸಿದೆ. ಗಾನವಿ ಸಾವು ಈ ಕುಟುಂಬವನ್ನು ಸಂಪೂರ್ಣವಾಗಿ ಛಿದ್ರಗೊಳಿಸಿದೆ.
ಅತ್ತೆ ಸಾವು–ಬದುಕಿನ ಹೋರಾಟ
ಮಗನ ಸಾವಿನ ಬೆನ್ನಲ್ಲೇ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಗಾನವಿ ಮನೆಯಲ್ಲಿ ಶೋಕದ ವಾತಾವರಣವಿದ್ದರೆ, ಸೂರಜ್ ಮನೆಯ ಪರಿಸ್ಥಿತಿ ದೇವರಿಗೂ ಕರುಣೆ ಮೂಡುವಂತಹಾಗಿದೆ.
ಅವಮಾನ ತಾಳಲಾರದೆ ಕಠಿಣ ನಿರ್ಧಾರವೇ?
ಗಾನವಿ ಆತ್ಮಹತ್ಯೆ ನಂತರ ಆಕೆಯ ಪೋಷಕರು ಹಾಗೂ ಸಂಬಂಧಿಕರು ಸೂರಜ್ ಕುಟುಂಬದವರನ್ನು ಅವಮಾನಿಸಿ, ಕಟುವಾಗಿ ಟೀಕಿಸಿದ್ದಾರೆ ಎನ್ನಲಾಗಿದೆ. ಪತ್ನಿ ಕುಟುಂಬದವರಿಂದ ಎದುರಾದ ಅವಮಾನ ಹಾಗೂ ಮಾನಸಿಕ ಪೀಡನೆಯನ್ನು ತಾಳಲಾರದೆ ಸೂರಜ್ ಈ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದೆಂದು ಶಂಕಿಸಲಾಗಿದೆ.
ಮದುವೆಯಾಗಿ ಒಂದೂವರೆ ತಿಂಗಳಷ್ಟೇ
ವಿದ್ಯಾರಣ್ಯಪುರದ ಸೂರಜ್ ಮತ್ತು ಗಾನವಿ ಮದುವೆ ಅಕ್ಟೋಬರ್ 29ರಂದು ನಡೆದಿತ್ತು. ನವೆಂಬರ್ 23ರಂದು ಅರಮನೆ ಮೈದಾನದ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಭರ್ಜರಿ ರಿಸೆಪ್ಷನ್ ಕೂಡ ಆಯೋಜಿಸಲಾಗಿತ್ತು. ಆದರೆ ಮದುವೆಯಾಗಿ ಒಂದೂವರೆ ತಿಂಗಳು ಕೂಡ ಕಳೆಯುವ ಮುನ್ನವೇ ಇಬ್ಬರೂ ಬದುಕಿಗೆ ತೆರೆ ಎಳೆದಿದ್ದಾರೆ. ವಿಧಿಯಾಟಕ್ಕೆ ಎರಡು ಅಮೂಲ್ಯ ಜೀವಗಳು ಬಲಿಯಾಗಿವೆ.






