ಅತ್ತಿಗೆ ಜೊತೆಗಿನ ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೋರ್ವನನ್ನು ಅಣ್ಣನೇ ಕೊಲೆ ಮಾಡಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜೇಡಿಗೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ರಾಮಚಂದ್ರ (28) ಕೊಲೆಯಾದ ಯುವಕನಾಗಿದ್ದು, ಆತನ ಸಹೋದರ ಮಾಲತೇಶ್ ಆರೋಪಿಯಾಗಿದ್ದಾನೆ.
ನಾಪತ್ತೆ ಪ್ರಕರಣದ ತನಿಖೆ ವೇಳೆ, ತಮ್ಮನನ್ನು ಹತ್ಯೆ ಮಾಡಿ ನಿರಪರಾಧಿಯಂತೆ ವರ್ತಿಸುತ್ತಿದ್ದ ಅಣ್ಣನ ನಾಟಕವನ್ನು ಪೊಲೀಸರು ಕುಟುಂಬದ ಎದುರೇ ಬಯಲು ಮಾಡಿದ್ದಾರೆ.
ಸುಮಾರು ಒಂದೂವರೆ ತಿಂಗಳ ಹಿಂದೆ ರಾಮಚಂದ್ರ ಕಾಣೆಯಾಗಿದ್ದು, ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಮುಂದುವರಿಸಿದ ಪೊಲೀಸರು ಪ್ರಕರಣದಲ್ಲಿ ಅಚ್ಚರಿಯ ತಿರುವು ಕಂಡಿದ್ದಾರೆ.
ಪತ್ನಿಯೊಂದಿಗೆ ರಾಮಚಂದ್ರ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಮಾಲತೇಶ್ ಕೊಲೆ ನಡೆಸಿದ್ದು, ಶವವನ್ನು ತೋಟದಲ್ಲಿ ಹೂತು ಹಾಕಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ದೊರೆತ ಮಾಹಿತಿಯ ಮೇರೆಗೆ ತೋಟದಲ್ಲಿ ತೋಡಿಕೆ ನಡೆಸಿದಾಗ ರಾಮಚಂದ್ರನ ಶವ ಪತ್ತೆಯಾಗಿದೆ.
ಪ್ಲ್ಯಾನ್ ಮಾಡಿ ನಡೆಸಿದ ಕೊಲೆ
ಹೆಂಡತಿಯೊಂದಿಗೆ ತಮ್ಮನ ಅಕ್ರಮ ಸಂಬಂಧ ವಿಷಯ ತಿಳಿದು ಅಣ್ಣ ಮಾಲತೇಶ್ ಆಕ್ರೋಶಗೊಂಡಿದ್ದಾನೆ. ಇದೇ ಕಾರಣದಿಂದ ರಾಮಚಂದ್ರನ ಹತ್ಯೆಗೆ ಪೂರ್ವಯೋಜನೆ ರೂಪಿಸಿದ್ದಾನೆ. ಶೀಘ್ರ ಮದುವೆ ಮಾಡಿಸುವುದಾಗಿ ಪೂಜೆ ನೆಪದಲ್ಲಿ ಜೇಡಿಗೆರೆ ಬಳಿ ತಾನು ಕೆಲಸ ಮಾಡುತ್ತಿದ್ದ ತೋಟಕ್ಕೆ ರಾಮಚಂದ್ರನನ್ನು ಕರೆದುಕೊಂಡು ಹೋಗಿದ್ದಾನೆ.
ಅಲ್ಲಿ ಮದ್ಯಪಾನ ಮಾಡಿಸಿ, ಕಂಬಕ್ಕೆ ಕಟ್ಟಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆಗೆ ಮುನ್ನವೇ ಶವ ಹೂತು ಹಾಕಲು ಗುಂಡಿ ತೋಡಿ ಸಿದ್ಧಪಡಿಸಿದ್ದ ಮಾಲತೇಶ್, ನಂತರ ಯಾರಿಗೂ ಅನುಮಾನ ಬಾರದಂತೆ ಶವವನ್ನು ಹೂತು ಹಾಕಿದ್ದಾನೆ. ರಾಮಚಂದ್ರ ನಾಪತ್ತೆಯಾಗಿ ಕುಟುಂಬ ಆತಂಕದಲ್ಲಿದ್ದರೂ, ತಾನು ಏನೂ ತಿಳಿಯದಂತೆ ವರ್ತಿಸಿದ್ದಾನೆ. ಆದರೆ ಮೊಬೈಲ್ ಟವರ್ ಲೊಕೇಶನ್ ಆಧರಿಸಿದ ತನಿಖೆಯಲ್ಲಿ ಕೊಲೆ ಪ್ರಕರಣ ಬಯಲಾಗಿದೆ.






