ಧರ್ಮಸ್ಥಳ ಸುತ್ತಲಿನ ಕಾಡಲ್ಲಿ ಹೂತಿಡಲಾಗಿದೆ ಎನ್ನಲಾದ ನೂರಾರು ಶವಗಳ ಆರೋಪ ಪ್ರಕರಣ ಸಂಬಂಧ ಎಸ್‌ಐಟಿ ತಂಡ ಬುರುಡೆ ರಹಸ್ಯ ಶೋಧಿಸುವ ಕಾರ್ಯ ಮುಂದುವರಿದಿದೆ. ಇಂದೂ ಸಹ ಕಾರ್ಯಾಚರಣೆ ನಡೆಸುತ್ತಿರುವ ಎಸ್‌ಐಟಿ ತಂಡಕ್ಕೆ ಹಲವಾರು ಅಸ್ಥಿ ಪಂಜರಗಳು ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರ ಇವೆ ಎಂದು ದೂರುದಾರ ತೋರಿಸಿದ್ದನಂತೆ. ಹೀಗಾಗಿ ಆ 11 ಪಾಯಿಂಟ್‌ನಲ್ಲಿ ಅಸ್ಥಿಪಂಜರದb ಹುಡುಗಾಟದ ವೇಳೆ ಹಲವು ಮೂಳೆಗಳು ಸಿಕ್ಕಿದೆ ಎಂದು ತಿಳಿದುಬಂದಿದೆ. ಈಗಾಗಲೇ ಪಾಯಿಂಟ್ ನಂಬರ್ 6 ರ ಉತ್ಖನನದ ವೇಳೆ 25 ಮೂಳೆಗಳನ್ನು ಎಸ್‌ಐಟಿ ಟೀಂ ಕಲೆಹಾಕಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಇಚಿಲಂಪಾಡಿ ನಿವಾಸಿ ಜಯನ್ ಎಂಬವರು ಶನಿವಾರ ಸಂಜೆ ಬೆಳ್ತಂಗಡಿಯ ಎಸ್‌ಐಟಿ ಅಧಿಕಾರಿಗಳ ಕಚೇರಿಗೆ ಆಗಮಿಸಿ, ಧರ್ಮಸ್ಥಳದಲ್ಲಿ 15 ವರ್ಷದ ಬಾಲಕಿಯನ್ನು ಹೂತುಹಾಕಿರುವ ಸ್ಥಳ ನನಗೆ ಗೊತ್ತಿದೆ. ನಾನೇ ಅದಕ್ಕೆ ಪ್ರತ್ಯಕ್ಷದರ್ಶಿ ಎಂದು ಹೇಳಿಕೆ ಕೊಟ್ಟಿದ್ದರು. ಅದರಂತೆ ಅವರನ್ನು ಇಂದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದರು.
ಉಳಿದ ಮೂರು ಸ್ಥಳದಲ್ಲಿ ಕಾರ್ಯಾಚರಣೆ
ಎಸ್‌ಐಟಿ ಕಚೇರಿಗೆ ಆಗಮಿಸಿ ಹದಿನೈದು ವರ್ಷದ ಹಿಂದೆ ಅನುಮಾನಾಸ್ಪದವಾಗಿ ಸಾವಪ್ಪಿದ ಬಾಲಕಿಯನ್ನು ಹೂತು ಹಾಕುವುದನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಇದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಶವ ಎಲ್ಲಿ ಹೂತು ಹಾಕಿದ್ದಾನೆ ಎಂದು ನನಗೆ ಗೊತ್ತಿದೆ. ಯಾವುದೇ ಪ್ರಕರಣ ದಾಖಲು ಮಾಡದೇ ಹೂತು ಹಾಕಲಾಗಿದೆ. ನಾನು ಆ ಜಾಗವನ್ನು ತೋರಿಸುತ್ತೇನೆ ಎಂದು ಹೇಳಿದ್ದರು.
ಈಗಾಗಲೇ ಎಸ್‌ಐಟಿ ಹತ್ತು ಕಡೆ ಉತ್ಪನನ ನಡೆಸಲಾಗಿದ್ದು, ಈಗ ಉಳಿದ ಮೂರು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮೂರು ಪಾಯಿಂಟ್ ಕೇಸ್ ನ ಮೇಲೆ ಬಹಳ ಪ್ರಭಾವ ಬೀರುತ್ತದೆ. ಈ ನಿಟ್ಟಿನಲ್ಲಿ ಇಂದು ಬಹಳ ಮುಖ್ಯ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೆ, ಉಳಿದಿರುವ ಮೂರು ಪಾಯಿಂಟ್ ಗಳು ದೊಡ್ಡ ದೊಡ್ಡ ಮರದ ಪಕ್ಕದಲ್ಲಿದೆ ಎಂದು ತೋರಿಸಿದ್ದು, ಕಾರ್ಯಾಚರಣೆಗೆ ಅಡ್ಡಿ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ 11, 12, ಹಾಗೂ 13 ನೇ ಸ್ಥಳಕ್ಕೆ ಯಾರು ತೆರಳದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.