ಕನ್ನಡ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಗಾಂಧಾರಿ ಮತ್ತು ರಾಧಾ ರಮಣ ಸೀರಿಯಲ್ ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಕುಟುಂಬದ ಸಂಬಂಧಿಯಿಂದಲೇ ಹಲ್ಲೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಕಾವ್ಯಾ ಗೌಡ ಅವರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಸಹಿಸದೇ ಈ ದಾಳಿ ನಡೆಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾವ್ಯಾ ಗೌಡ ಅವರ ಪತಿ ಸೋಮಶೇಖರ್ ಮೇಲೆ ಅತ್ತಿಗೆಯ ತಂದೆಯಾದ ರವಿಕುಮಾರ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಾವ್ಯಾ ಗೌಡ ಅವರ ಅಕ್ಕ ಭವ್ಯಾ ಗೌಡ ಅವರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೋಮಶೇಖರ್ ಅವರನ್ನು ರೇ*ಪ್ ಮಾಡ್ತೇನೆ ಎಂದು ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ. ನಂದಿಶ್, ಪ್ರಿಯಾ ಮತ್ತು ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸದ್ಯ ಕಾವ್ಯಾ ಗೌಡ ಹಾಗೂ ಅವರ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟಿ ಕಾವ್ಯಾ ಗೌಡ ಅವರು ಉದ್ಯಮಿ ಸೋಮಶೇಖರ್ ಅವರನ್ನು ವಿವಾಹವಾಗಿದ್ದು, ಅವರ ಕುಟುಂಬಕ್ಕೆ ರಾಜಕೀಯ ಹಿನ್ನೆಲೆಯೂ ಇದೆ ಎನ್ನಲಾಗಿದೆ.
2021ರಲ್ಲಿ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಇವರ ವಿವಾಹ ನೆರವೇರಿತ್ತು. ಮದುವೆಗೆ ಮುನ್ನ ದುಬೈನಲ್ಲಿ ಪ್ರೀ–ವೆಡ್ಡಿಂಗ್ ಫೋಟೋಶೂಟ್ ಕೂಡ ನಡೆದಿತ್ತು. 1992ರಲ್ಲಿ ಜನಿಸಿದ ಕಾವ್ಯಾ ಗೌಡ ಅವರಿಗೆ ಭವ್ಯಾ ಗೌಡ ಎನ್ನುವ ಸಹೋದರಿ ಹಾಗೂ ಒಬ್ಬ ಅಣ್ಣ ಇದ್ದಾರೆ ಎಂದು ತಿಳಿದುಬಂದಿದೆ. ಮೀರಾ ಮಾಧವ, ಗಾಂಧಾರಿ, ರಾಧಾ ರಮಣ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಕಾವ್ಯಾ ಅಭಿನಯಿಸಿದ್ದಾರೆ. ಅಲ್ಲದೆ ಬಕಾಸುರ ಎಂಬ ಸಿನಿಮಾದಲ್ಲೂ ನಟಿಸಿದ್ದು, ಆ ಚಿತ್ರದಲ್ಲಿ ರೋಹಿತ್ ನಾಯಕನಾಗಿದ್ದರು.
ಎರಡು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ನಡೆದ ದಿನವೇ ಕಾವ್ಯಾ–ಸೋಮಶೇಖರ್ ದಂಪತಿಗೆ ಮಗಳು ಜನಿಸಿದ್ದಳು. ಸಿಯಾ ಎಂದು ಹೆಸರಿಟ್ಟಿರುವ ಮಗಳಿಗೆ ಇದೀಗ ಎರಡು ವರ್ಷ ತುಂಬಿದ್ದು, ಇತ್ತೀಚೆಗೆ ಜನ್ಮದಿನ ಸಂಭ್ರಮವನ್ನು ಆಚರಿಸಿದ್ದರು.
ಕಾವ್ಯಾ ಗೌಡ ಅವರು ಮ್ಯಾನಿಫೆಸ್ಟೇಶನ್ ಕ್ಲಾಸ್‌ಗಳನ್ನು ನಡೆಸುತ್ತಿದ್ದು, ಆನ್‌ಲೈನ್ ಮೂಲಕ ಅನೇಕರಿಗೆ ತರಬೇತಿ ನೀಡಿದ್ದಾರೆ. ಹಲವರು ಈ ತರಗತಿಯಿಂದ ಲಾಭವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಭವ್ಯಾ ಗೌಡ ಅವರ ಬ್ಯೂಟಿಕ್‌ಗೆ ಕಾವ್ಯಾ ಗೌಡ ಅವರೇ ಮಾಡೆಲ್ ಆಗಿದ್ದು, ದುಬಾರಿ ಮತ್ತು ವಿಭಿನ್ನ ಉಡುಪುಗಳಲ್ಲಿ ಅವರು ನಿರಂತರವಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ.
ಪತಿ, ಮಗಳು ಹಾಗೂ ಕುಟುಂಬದೊಂದಿಗೆ ಕಾವ್ಯಾ ಗೌಡ ಅವರು ಆಗಾಗ ವಿದೇಶಿ ಪ್ರವಾಸ, ದುಬಾರಿ ರೆಸಾರ್ಟ್ ಹಾಗೂ ಹೋಟೆಲ್‌ಗಳಲ್ಲಿ ಸಮಯ ಕಳೆಯುತ್ತಾರೆ. ಈ ಪ್ರವಾಸದ ಚಿತ್ರಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ ಸುಮಾರು 1.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಸಾಯಿ ಬಾಬಾ ಭಕ್ತೆಯಾಗಿರುವ ಕಾವ್ಯಾ ಗೌಡ ಅವರು ಧಾರ್ಮಿಕ ಆಚರಣೆಗಳು ಮತ್ತು ಹಬ್ಬಗಳನ್ನು ವೈಭವದಿಂದ ನೆರವೇರಿಸುತ್ತಾರೆ. ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಕಾವ್ಯಾಗೆ ಸ್ನೇಹವಿದ್ದು, ಕುಟುಂಬದ ಕಾರ್ಯಕ್ರಮಗಳಲ್ಲಿ ವಿಜಯಲಕ್ಷ್ಮೀ ಹಾಜರಾಗುವುದು ಸಾಮಾನ್ಯವಾಗಿದೆ.
2021ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಆಭರಣ ವಿನ್ಯಾಸದ ಮೇಲೆ ಆಸಕ್ತಿ ಇದೆ ಎಂದು ಹೇಳಿದ್ದ ಕಾವ್ಯಾ ಗೌಡ, ಮುಂದುವರೆದು ಅದೇ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಪ್ರಸ್ತುತ ಅವರು ಈ ಕೆಲಸದಲ್ಲಿ ಸಕ್ರಿಯವಾಗಿದ್ದಾರಾ ಅಥವಾ ಇಲ್ಲವಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಗಾಂಧಾರಿ–ರಾಧಾ ರಮಣ ಖ್ಯಾತಿಯ ನಟಿ ಕಾವ್ಯಾ ಗೌಡ ಹಾಗೂ ಪತಿಗೆ ಸಂಬಂಧಿಯಿಂದಲೇ ಹಲ್ಲೆ!!
By krutika naik
On: January 28, 2026 8:05 AM
---Advertisement---






