ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡುವ ಲಕ್ಷಣ ಕಾಣಿಸುತ್ತಿರುವ ಬೆನ್ನಲ್ಲೇ, ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ವರ್ಷಗಳ ಸಂಪ್ರದಾಯವನ್ನೇ ಮುರಿದಿದ್ದಾರೆ ಎಂಬ ಚರ್ಚೆ ಜೋರಾಗಿದೆ.
ಸಾಮಾನ್ಯವಾಗಿ ಪ್ರತೀ ವರ್ಷ ಈದ್ ಹಬ್ಬದ ಸಂದರ್ಭದಲ್ಲೇ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುವ ಸಲ್ಮಾನ್ ಖಾನ್, ಈ ಬಾರಿ ಆ ರೂಢಿಗೆ ಬ್ರೇಕ್ ಹಾಕಿದ್ದಾರೆ. ಸಲ್ಮಾನ್ ಅಭಿನಯದ ‘ಗಲ್ವಾನ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಈಗ ಆ ಚಿತ್ರವನ್ನು ಏಪ್ರಿಲ್ 17ಕ್ಕೆ ಮುಂದೂಡಲಾಗಿದೆ.
ಇದೇ ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿಯೂ ಏಕಕಾಲಕ್ಕೆ ಶೂಟ್ ಆಗಿರುವ ಈ ಚಿತ್ರ, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಆಗಿ ತೆರೆಗೆ ಬರಲಿದೆ. ಇದರಿಂದ ‘ಟಾಕ್ಸಿಕ್’ಗೆ ಪ್ಯಾನ್ ಇಂಡಿಯಾ ಮಾತ್ರವಲ್ಲ, ವಿಶ್ವಮಟ್ಟದ ನಿರೀಕ್ಷೆ ನಿರ್ಮಾಣವಾಗಿದೆ.
ಯಶ್ ಬಾಕ್ಸ್ ಆಫೀಸ್ ಪವರ್ ಬಗ್ಗೆ ಈಗಾಗಲೇ ಇಂಡಸ್ಟ್ರಿಯಲ್ಲಿ ಭಾರೀ ಚರ್ಚೆ ಇದೆ. 2018ರಲ್ಲಿ ರಿಲೀಸ್ ಆದ ‘ಕೆಜಿಎಫ್’ ಎದುರು ಶಾರುಖ್ ಖಾನ್ ಅಭಿನಯದ ‘ಝೀರೋ’ ಸಿನಿಮಾ ಹಿನ್ನಡೆ ಅನುಭವಿಸಿತ್ತು. ಹಾಗೆಯೇ ‘ಕೆಜಿಎಫ್ 2’ ಬಿಡುಗಡೆಯ ವೇಳೆ ದಳಪತಿ ವಿಜಯ್ ಅಭಿನಯದ ‘ಬೀಸ್ಟ್’ ಚಿತ್ರವೂ ಯಶ್ ಚಿತ್ರದ ಮುಂದೆ ಸೋಲು ಕಂಡಿತ್ತು. ಈ ಹಿನ್ನೆಲೆ ಯಶ್ ಎದುರು ಕ್ಲಾಶ್ ಆಗಲು ದೊಡ್ಡ ಸ್ಟಾರ್‌ಗಳು ಕೂಡ ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗಿದೆ.
ಇದೇ ದಿನ ‘ಧುರಂಧರ್ 2’ ಕೂಡ ಬಿಡುಗಡೆಯಾಗಲಿದ್ದು, ಆ ಚಿತ್ರವೂ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ಕಾರಣದಿಂದಲೇ ಮಾರ್ಚ್ 19ರ ಬಾಕ್ಸ್ ಆಫೀಸ್ ಕ್ಲಾಶ್ ಇನ್ನಷ್ಟು ರೋಚಕವಾಗಲಿದೆ.
ಇದೀಗ ಯಶ್ ಅವರ ‘ಟಾಕ್ಸಿಕ್’ ಎದುರು ಬರುವುದನ್ನು ತಪ್ಪಿಸಲು ಸಲ್ಮಾನ್ ಖಾನ್ ತಮ್ಮ ಈದ್ ಬಿಡುಗಡೆ ಸಂಪ್ರದಾಯವನ್ನೇ ಬದಲಿಸಿದ್ದಾರೆ ಎಂಬ ಮಾತುಗಳು ಸಿನಿ ವಲಯದಲ್ಲಿ ಹರಿದಾಡುತ್ತಿವೆ.
ಇನ್ನೂ ಇಂದು (ಡಿಸೆಂಬರ್ 27) ಸಲ್ಮಾನ್ ಖಾನ್ ಅವರ ಜನ್ಮದಿನವಾಗಿದ್ದು, ಈ ಸಂದರ್ಭ ‘ಗಲ್ವಾನ್’ ಟೀಸರ್ ಬಿಡುಗಡೆ ಮಾಡಿ ಹೊಸ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.






