ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಚಿನ್ನದ ಸಾಲಗಳ (ಗೋಲ್ಡ್ ಲೋನ್) ಬೇಡಿಕೆ ಅಪಾರವಾಗಿ ಹೆಚ್ಚಾಗಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನ ಇದ್ದರೂ ಕೂಡ ಸಾಲ ಪಡೆಯುವುದು ಅಷ್ಟು ಸುಲಭವಿರುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಗೋಲ್ಡ್ ಲೋನ್ ಮೇಲಿನ ನಿಯಂತ್ರಣವನ್ನು ಕಠಿಣಗೊಳಿಸಲು ಮುಂದಾಗಿದೆ.
ಇದನ್ನು ಓದಿ: ಸೈಕಲ್ ಕಲಿಯಲು ಬಂದ 13 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: 60 ವರ್ಷದ ಆಟೋ ಚಾಲಕ
RBI ಇತ್ತೀಚಿನ ಅಂಕಿಅಂಶಗಳ ಪ್ರಕಾರ, ನವೆಂಬರ್ 2025ರ ಅಂತ್ಯದ ವೇಳೆಗೆ ಚಿನ್ನದ ಸಾಲಗಳು ವರ್ಷಾವರ್ಷಕ್ಕೆ ಶೇ.125ರಷ್ಟು ಹೆಚ್ಚಳ ಕಂಡಿವೆ. ನವೆಂಬರ್ 2023ರಲ್ಲಿ ರೂ. 89,800 ಕೋಟಿ ಇದ್ದ ಚಿನ್ನದ ಸಾಲಗಳು, ನವೆಂಬರ್ 2024ರಲ್ಲಿ ರೂ. 1.59 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ನವೆಂಬರ್ 2025ರ ವೇಳೆಗೆ ರೂ. 3.5 ಲಕ್ಷ ಕೋಟಿಗೆ ತಲುಪಿವೆ. ಕೇವಲ ಒಂದು ವರ್ಷದಲ್ಲೇ ಗೋಲ್ಡ್ ಲೋನ್ ಗಾತ್ರ ದ್ವಿಗುಣಗೊಂಡಿದೆ.
ಚಿನ್ನದ ಸಾಲಗಳಿಗೆ ಭಾರೀ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣವೇ ಚಿನ್ನದ ಬೆಲೆ ಏರಿಕೆ. 2025ರಲ್ಲಿ ಚಿನ್ನದ ಬೆಲೆಗಳು ಶೇ.64ರಷ್ಟು ಹೆಚ್ಚಾಗಿದ್ದು, ಪ್ರಸ್ತುತ 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ಸುಮಾರು ರೂ. 1.35 ಲಕ್ಷಕ್ಕೆ ತಲುಪಿದೆ. ಇದರಿಂದ ಕಡಿಮೆ ಚಿನ್ನ ಇಟ್ಟು ಹೆಚ್ಚು ಸಾಲ ಪಡೆಯುವ ಅವಕಾಶ ಸಾಲಗಾರರಿಗೆ ದೊರಕಿತ್ತು.
ಈ ಮಾರುಕಟ್ಟೆಯಲ್ಲಿ ಬ್ಯಾಂಕ್‌ಗಳ ಜೊತೆಗೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC) ಕೂಡ ಪ್ರಮುಖ ಪಾತ್ರ ವಹಿಸುತ್ತಿವೆ. ಗೋಲ್ಡ್ ಲೋನ್ ಮಾರುಕಟ್ಟೆಯಲ್ಲಿ NBFCಗಳ ಬಾಕಿ ಸಾಲಗಳು ಸುಮಾರು ರೂ. 3 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ ಇತ್ತೀಚೆಗೆ ಬ್ಯಾಂಕುಗಳು NBFCಗಳನ್ನು ಮಾರುಕಟ್ಟೆ ಪಾಲಿನಲ್ಲಿ ಹಿಂದಿಕ್ಕಿವೆ. RBI ಮಾಹಿತಿ ಪ್ರಕಾರ, ಒಟ್ಟು ಚಿನ್ನದ ಸಾಲಗಳಲ್ಲಿ ಬ್ಯಾಂಕುಗಳ ಪಾಲು ಶೇ.50.35ರಷ್ಟಿದೆ.
ಮುತ್ತೂಟ್ ಫೈನಾನ್ಸ್, ಮಣಪ್ಪುರಂ ಫೈನಾನ್ಸ್ ಮತ್ತು IIFL ಫೈನಾನ್ಸ್ ಈ ಕ್ಷೇತ್ರದ ಪ್ರಮುಖ ಸಂಸ್ಥೆಗಳಾಗಿವೆ. RBI ಹಣಕಾಸು ಸ್ಥಿರತೆ ವರದಿ ಪ್ರಕಾರ, 2025ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬ್ಯಾಂಕುಗಳು ಹಾಗೂ NBFCಗಳಿಂದ ನೀಡಲಾದ ಚಿನ್ನದ ಸಾಲಗಳು ಒಟ್ಟು ಬಾಕಿ ಸಾಲಗಳಲ್ಲಿ ಶೇ.5.8ರಷ್ಟು ಪಾಲು ಹೊಂದಿವೆ.
ಇದಕ್ಕೆ ಜೊತೆಗೇ ಇತರೆ ಸಾಲ ವಿಭಾಗಗಳಲ್ಲೂ ಬೆಳವಣಿಗೆ ಕಂಡುಬಂದಿದೆ. ವಾಹನ ಸಾಲಗಳು ಶೇ.11ರಷ್ಟು ಏರಿಕೆಯಾಗಿ ರೂ. 6.8 ಲಕ್ಷ ಕೋಟಿಗೆ ತಲುಪಿವೆ. ವೈಯಕ್ತಿಕ ಸಾಲಗಳು ಶೇ.12.7, ವಾಣಿಜ್ಯ ರಿಯಲ್ ಎಸ್ಟೇಟ್ ಸಾಲಗಳು ಶೇ.12.5 ಮತ್ತು ಸೇವಾ ಕ್ಷೇತ್ರದ ಸಾಲಗಳು ಶೇ.11.7ರಷ್ಟು ಹೆಚ್ಚಾಗಿವೆ. ಆದರೆ ಗೃಹ ಸಾಲಗಳ ಪಾಲು ಸ್ವಲ್ಪ ಇಳಿಕೆಯಾಗಿದ್ದು, ಕ್ರೆಡಿಟ್ ಕಾರ್ಡ್ ಬಾಕಿಗಳಲ್ಲೂ ಕುಸಿತ ಕಂಡುಬಂದಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ RBI ಹೊಸ ನಿಯಮಗಳ ಜಾರಿಗೆ ಮುಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ಗೋಲ್ಡ್ ಲೋನ್ ಪಡೆಯುವುದು ಇನ್ನಷ್ಟು ಕಠಿಣವಾಗುವ ಸಾಧ್ಯತೆ ಇದೆ. ಸಾಲಗಾರರು ಹೊಸ ಮಾರ್ಗಸೂಚಿಗಳನ್ನು ತಿಳಿದುಕೊಂಡು ಸಾಲ ಪಡೆಯುವಂತೆ RBI ಸೂಚಿಸಿದೆ.







1 thought on “ಚಿನ್ನ ಇದ್ದರೂ ಇನ್ಮುಂದೆ ಸುಲಭವಾಗಿ ಸಿಗಲ್ಲ ಗೋಲ್ಡ್ ಲೋನ್: RBI ಹೊಸ ನಿಯಮ..!”
Comments are closed.