ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಟ–ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ತಮ್ಮ ತಾಯಿಯೊಂದಿಗೆ ಭಾಗವಹಿಸಿ ಭಾವುಕ ಕ್ಷಣಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ವೇದಿಕೆಯಲ್ಲಿ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡ ರಾಜ್, ಅನೇಕ ವರ್ಷಗಳ ಕಾಲ ತಾಯಿಯ ದುಡಿಮೆಯಲ್ಲೇ ತಮ್ಮ ಜೀವನ ಸಾಗಿದುದನ್ನು ಮನಮುಟ್ಟುವಂತೆ ಹೇಳಿದರು.
ಇದನ್ನು ಓದಿ: ಜೈಲು ಡಿಜಿಪಿ ಅಲೋಕ್ ಕುಮಾರ್ ಆದೇಶ: ದರ್ಶನ್ ಸೇರಿ ಎಲ್ಲಾ ಕೈದಿಗಳ ಆಹಾರ, ಬಟ್ಟೆ ನಿಯಂತ್ರಣ
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಶೈಲಿ ಮತ್ತು ಮ್ಯಾನರಿಸಂನಿಂದ ಗುರುತಿಸಿಕೊಂಡಿರುವ ರಾಜ್ ಬಿ. ಶೆಟ್ಟಿ, ಕಳೆದ ವರ್ಷ ಬಿಡುಗಡೆಯಾದ ‘ಸು ಪ್ರಂ ಸೋ’ ಸಿನಿಮಾದ ಭರ್ಜರಿ ಯಶಸ್ಸಿನಿಂದ ಇನ್ನಷ್ಟು ಜನಪ್ರಿಯತೆ ಗಳಿಸಿದ್ದಾರೆ. ಪ್ರಸ್ತುತ ಅವರು ಉಪೇಂದ್ರ ಹಾಗೂ ಶಿವರಾಜ್ ಕುಮಾರ್ ಜೊತೆ ‘45’ ಸಿನಿಮಾದಲ್ಲಿ ನಟಿಸುತ್ತಿದ್ದು, ಮತ್ತೊಂದೆಡೆ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ ‘ದಿ ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲೂ ತಮ್ಮದೇ ಹವಾ ಕ್ರಿಯೇಟ್ ಮಾಡಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣ—ಎಲ್ಲ ಕ್ಷೇತ್ರಗಳಲ್ಲೂ ಮಿಂಚುತ್ತಿರುವ ರಾಜ್ ಶೆಟ್ಟಿ ಅವರ ಆರಂಭದ ದಿನಗಳು ಹೇಗಿದ್ದವು ಎಂಬುದನ್ನು ಈ ಕಾರ್ಯಕ್ರಮದಲ್ಲಿ ಅವರು ತೆರೆದಿಟ್ಟರು.
ಕಾರ್ಯಕ್ರಮದ ವೇಳೆ ನಿರೂಪಕಿ ಅನುಪಮಾ ಗೌಡ ಅವರು, “ನಿಮ್ಮ ತಾಯಿಗೆ ನೀವು ಏನಾಗಬೇಕು ಎಂಬ ಆಸೆ ಇತ್ತಾ?” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಜ್ ಬಿ. ಶೆಟ್ಟಿ,
“ನಾನು ಚಿಕ್ಕವನಿದ್ದಾಗ ಅಮ್ಮನಿಗೆ ಒಂದೇ ಆಸೆ—ಇವನು ಮನುಷ್ಯನಾದರೆ ಸಾಕು. ಎಷ್ಟೋ ವರ್ಷಗಳ ಕಾಲ ನಾನು ನನ್ನ ತಾಯಿ ದುಡಿದ ದುಡಿಮೆಯಲ್ಲೇ ಬದುಕಿದ್ದೇನೆ. ಇಂದು ನಾನು ಏನಾಗಿದ್ದೇನೋ ಅದರಲ್ಲಿರುವ ಒಳ್ಳೆಯದು ನಿಮಗೆ ಕಾಣುತ್ತದೆ, ಕೆಟ್ಟದ್ದು ನನಗೆ ಗೊತ್ತು,” ಎಂದು ಭಾವುಕರಾಗಿ ಹೇಳಿದರು.
ಈ ವೇಳೆ ರಾಜ್ ಅವರ ತಾಯಿಯನ್ನು ವೇದಿಕೆಗೆ ಆಹ್ವಾನಿಸಲಾಯಿತು. ನಿರೂಪಕಿ, “ಮಗನನ್ನು ನಿಭಾಯಿಸಲು ನೀವು ಬಳಸುತ್ತಿದ್ದ ಆಯುಧ ಏನು?” ಎಂದು ಪ್ರಶ್ನಿಸಿದಾಗ, ಅವರು ನಗುತ್ತಾ,
“ನಾನು ಕತ್ತಿಯನ್ನೇ ಹಿಡಿಯುತ್ತಿದ್ದೆ. ಸಮಾಜಕ್ಕೆ ಒಳ್ಳೆಯ ಮಗನಾಗದೇ ಹೋದರೆ ಅಂತಹ ಮಗ ಬೇಡವೇ ಬೇಡ ಅನ್ನೋದು ನನ್ನ ಅಭಿಪ್ರಾಯ,” ಎಂದು ಸ್ಪಷ್ಟವಾಗಿ ಹೇಳಿದರು.
ಅಮ್ಮನ ಈ ಮಾತಿಗೆ ಪ್ರತಿಕ್ರಿಯಿಸಿದ ರಾಜ್ ಬಿ. ಶೆಟ್ಟಿ,
“ನಮ್ಮ ಅಮ್ಮ ಮರ್ಯಾದೆ ಕಳೆದುಕೊಳ್ಳಬೇಕಾದ ಸಂದರ್ಭ ಬಂದರೂ ಹಿಂದೆ ಸರಿಯಲ್ಲ. ನಾನು ಮೈಕ್ ಹಿಡಿದುಕೊಂಡು ಪಕ್ಕದಲ್ಲಿ ನಿಂತುಕೊಳ್ಳುತ್ತೇನೆ,” ಎಂದು ಹೇಳಿ ಸಭಿಕರ ಮನ ಗೆದ್ದರು.
ರಾಜ್ ಬಿ. ಶೆಟ್ಟಿ ಅವರ ತಾಯಿಯ ಮಾತುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕರು “ಸಮಾಜಕ್ಕೆ ಒಳ್ಳೆಯ ಮಗನಾಗದೇ ಹೋದರೆ ಅಂತಹ ಮಗ ಬೇಡ ಅನ್ನೋ ಮಾತು ಬಹಳ ಅರ್ಥಪೂರ್ಣ” ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ರಾಜ್ ಅವರ ಅಮ್ಮ ಅವರ ಸೋದರಿಯಂತೆ ಯಂಗ್ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ “ಬಡವರ ಮಕ್ಕಳು ಬೆಳ್ಳಿಬೇಕು ಗುರು” ಎಂಬ ಮಾತಿಗೆ ತಮ್ಮದೇ ವ್ಯಾಖ್ಯಾನ ನೀಡಿದ್ದ ರಾಜ್ ಬಿ. ಶೆಟ್ಟಿ,
“ಬಡವರ ಮಕ್ಕಳು, ದೊಡ್ಡವರ ಮಕ್ಕಳು ಅನ್ನೋ ಬೇಧ ಬೇಡ. ಯಾರಿಗೆ ಪ್ರತಿಭೆ ಇದೆಯೋ ಅವರಿಗೆ ಅವಕಾಶ ಸಿಗಬೇಕು. ಅರ್ಹತೆ ಇರುವವರೇ ಬೆಳೆಯಬೇಕು. ನಮ್ಮ ಬಡತನ ಅಥವಾ ನೋವನ್ನು ಟ್ರಂಪ್ ಕಾರ್ಡ್ ಮಾಡಬಾರದು,” ಎಂದು ಹೇಳಿ ಗಮನ ಸೆಳೆದಿದ್ದರು.
ಸಿನಿಮಾ ವಿಚಾರಕ್ಕೆ ಬಂದರೆ, ರಾಜ್ ಬಿ. ಶೆಟ್ಟಿ ಅಭಿನಯದ ‘ರಕ್ಕಸಪುದೊಳ್’ ಸಿನಿಮಾ ಫೆಬ್ರವರಿ 6ರಂದು ಬಿಡುಗಡೆಯಾಗಲಿದ್ದು, ನಂತರ ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.






