ರಾಯಚೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೇಗ ಪ್ರಸಿದ್ಧಿ ಪಡೆಯಬೇಕೆಂಬ ಹುಚ್ಚು ಕೆಲ ಯುವಕರನ್ನು ವಿವಾದಾತ್ಮಕ ಕೃತ್ಯಗಳತ್ತ ತಳ್ಳುತ್ತಿದೆ. ಇದೇ ರೀತಿಯ ಘಟನೆ ರಾಯಚೂರಿನಲ್ಲಿ ನಡೆದಿದೆ.
ನವಾಜ್ ಮತ್ತು ಸೋಹೆಲ್ ಎಂಬ ಇಬ್ಬರು ಯುವಕರು ರಾಷ್ಟ್ರಧ್ವಜ ಹಾಗೂ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಗೆ ಚಪ್ಪಲಿ ಹಾಕಿ, ಅವುಗಳ ಮೇಲೆ ಕಾಲಿಟ್ಟು ವಿಡಿಯೋ ರೀಲ್ಸ್ ತಯಾರಿಸಿ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ರಾಯಚೂರು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಹಲವಾರು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ಸ್ಟೇಟಸ್ ಗಮನಿಸಿದ ವಿನಯ್ ಮತ್ತು ಆಂಜನೇಯ ಎಂಬವರು ಕಾರ್ತಿಕ್ ರೆಡ್ಡಿಗೆ ಮಾಹಿತಿ ನೀಡಿದ್ದು, ಅವರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ರಾಷ್ಟ್ರದ ಗೌರವದ ಸಂಕೇತವಾದ ಬಾವುಟ ಹಾಗೂ ಹಿಂದೂಗಳ ಪರಮ ಪವಿತ್ರ ಗ್ರಂಥಕ್ಕೆ ಅವಮಾನ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಸ್ಟೇಟಸ್ ಹಂಚಿದ 24 ಗಂಟೆಯೊಳಗೆ ನವಾಜ್ ಮತ್ತು ಸೋಹೆಲ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾರು ಈ ನವಾಜ್ ಮತ್ತು ಸೋಹೆಲ್?
ನವಾಜ್ ಮತ್ತು ಸೋಹೆಲ್ ರಾಯಚೂರು ನಗರದ ಎಲ್‌ಬಿಎಸ್ ನಗರ ನಿವಾಸಿಗಳಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯಲು ಈ ಕೃತ್ಯ ಎಸಗಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ. ಆದಾಗ್ಯೂ, ಪ್ರಕರಣದ ಎಲ್ಲಾ ಆಯಾಮಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇವರಿಗೆ ಯಾರಾದರೂ ಪ್ರೇರಣೆ ನೀಡಿದ್ದಾರೆಯೇ ಎಂಬುದರ ಕುರಿತೂ ತನಿಖೆ ಮುಂದುವರೆದಿದೆ.





