ನಗರ ಸೇರಿದಂತೆ ಜಿಲ್ಲೆಪೂರ್ತಿ ಕಳೆದ ಕೆಲವು ದಿನಗಳಿಂದ ಮಕ್ಕಳಲ್ಲಿ ನೆಗಡಿ, ಜ್ವರ, ಕೆಮ್ಮಿನಂತಹ ಸಾಂಕ್ರಾಮಿಕ ರೋಗಗಳು ತೀವ್ರವಾಗಿ ಹರಡುತ್ತಿವೆ. ಇದರ ಪರಿಣಾಮವಾಗಿ ಚಿಕ್ಕ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದು, ಪೋಷಕರು ಆತಂಕಗೊಂಡಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೋಂಕಿತ ಮಕ್ಕಳಿಂದ ತುಂಬಿಕೊಂಡಿದ್ದು, ಚಿಕಿತ್ಸೆ ಪಡೆಯಲು ಹಲವಾರು ಗಂಟೆಗಳ ಕಾಲ ಕಾಯುವಂತಾಗಿದೆ. ಈ ಅಸಹಾಯಕ ಪರಿಸ್ಥಿತಿ ಆರೋಗ್ಯ ಇಲಾಖೆಯ ಗಮನ ಸೆಳೆಯುತ್ತಿದೆ.
ಈ ನಿರಂತರ ಮಳೆಯಿಂದಾಗಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಲ್ಲೂ ಜ್ವರ, ನೆಗಡಿ ಹೆಚ್ಚಾಗಿ ಕಾಣಿಸಿಕೊಂಡಿದೆ. ವಿಶೇಷವಾಗಿ ಮಕ್ಕಳಲ್ಲಿ ಕಾಯಿಲೆ ವೇಗವಾಗಿ ಹರಡುತ್ತಿದ್ದು, ಹಲವು ದಿನಗಳ ಕಾಲ ಜ್ವರ ಪೀಡಿತರಾಗುತ್ತಿದ್ದಾರೆ. ಮಕ್ಕಳ ಆಸ್ಪತ್ರೆಗಳು ಎಲ್ಲವೂ ತುಂಬಿ ಹೋಗಿದ್ದು, ಬೆಳಗ್ಗೆ ಬೇಗನೇ ಜನರು ಆಸ್ಪತ್ರೆಗೆ ಆಗಮಿಸುತ್ತಿದ್ದು, ರಾತ್ರಿ ತಡವರೆಗೂ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಎದುರಾಗಿದೆ. ಆದರೆ ಆರೋಗ್ಯ ಇಲಾಖೆ ಇದು ಸಾಮಾನ್ಯ ಜ್ವರವಾಗಿದ್ದು, ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ನಿಮೋನಿಯಾ ಲಕ್ಷಣಗಳಿಲ್ಲ, ಜ್ವರ, ನೆಗಡಿ, ಕೆಮ್ಮು ತೀವ್ರವಾದರೂ, ಪಾಲಕರು ಆತಂಕಗೊಂಡು ಆಸ್ಪತ್ರೆಗಳಿಗೆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದಾರೆ. ಆದರೆ ಎಲ್ಲಿಯಾದರೂ ನಿಮೋನಿಯಾ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಕೇವಲ ಗಂಟಲು ನೋವು, ನೆಗಡಿ, ಕಿವಿ ನೋವಿನಂತಹ ಸಮಸ್ಯೆಗಳು ಮಾತ್ರ ಕಂಡು ಬರುತ್ತಿವೆ. ಮೂರು ದಿನಗಳವರೆಗೂ ಜ್ವರ ಮುಂದುವರಿದ ನಂತರವೂ ನೆಗಡಿ, ಕೆಮ್ಮು ಕೆಲವು ದಿನಗಳು ಉಳಿಯುತ್ತದೆ. ಔಷಧ ಸೇವಿಸಿದರೂ ತಕ್ಷಣದಲ್ಲಿ ಲಕ್ಷಣಗಳು ಕಡಿಮೆಯಾಗದೇ ಇರುವುದರಿಂದ ಪಾಲಕರು ಚಿಂತಿಸುತ್ತಿದ್ದಾರೆ. ಕೆಲ ಮಕ್ಕಳಲ್ಲಿ ನಿಶಕ್ತಿ ಹಾಗೂ ಕಾಲು ನೋವು ಹೆಚ್ಚಿರುವುದನ್ನೂ ಗಮನಿಸಲಾಗಿದೆ.
ಈ ವಾರ ರೋಗಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ
ಹೆಚ್ಚಿನ ಮಕ್ಕಳಲ್ಲಿ ಸಾಮಾನ್ಯ ಜ್ವರ, ಕೆಮ್ಮು, ನೆಗಡಿ, ಕಫದ ಲಕ್ಷಣಗಳೇ ಕಾಣಿಸಿಕೊಂಡಿವೆ. ಇದರ ಪರಿಣಾಮವಾಗಿ ವೈದ್ಯಕೀಯ ಮಾರುಕಟ್ಟೆಯಲ್ಲಿ ಪ್ಯಾರಾಸಿಟಮಲ್ ಮತ್ತು ನೆಗಡಿ ಔಷಧಗಳಿಗೆ ಅಪಾರ ಬೇಡಿಕೆ ಉಂಟಾಗಿದೆ. ಸರ್ಕಾರಿ ಆಸ್ಪತ್ರೆಗಳೂ ಸಹ ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ನಂತರ ಜ್ವರ, ಕೆಮ್ಮು, ನೆಗಡಿಗೆ ಸಂಬಂಧಿಸಿದ ಔಷಧಿಗಳ ಮಾರಾಟ ಗಗನಕ್ಕೇರಿರುವುದು ಇದೇ ವರ್ಷ. ಕಳೆದ ಮೂರು ವರ್ಷಗಳಲ್ಲಿ ಇಷ್ಟೊಂದು ಮಟ್ಟದ ಬೇಡಿಕೆ ಯಾವತ್ತೂ ಕಂಡು ಬಂದಿರಲಿಲ್ಲ ಎಂದು ಔಷಧಿ ವ್ಯಾಪಾರಿಗಳು ಹೇಳುತ್ತಿದ್ದಾರೆ.
“ಈ ಬಾರಿ ಸತತವಾಗಿ ಮಳೆ ಸುರಿದ ಪರಿಣಾಮ ವಾತಾವರಣದಲ್ಲಿ ಏರುಪೇರಾಗಿದೆ. ಸಾಕಷ್ಟು ಜನರಲ್ಲಿ ಜ್ವರ, ನೆಗಡಿ, ಕೆಮ್ಮಿನಂತಹ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಂಡಿದೆ. ಮಕ್ಕಳಲ್ಲಿ ಬೇಗ ಈ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದು ಮೂರು ದಿನಗಳ ಮಟ್ಟಿಗೆ ಹೆಚ್ಚಾಗಿರಲಿದ್ದು, ವಾರದೊಳಗೆ ಕಡಿಮೆಯಾಗಲಿದೆ. ಇದೇನು ಆತಂಕ ಪಡುವ ಗಂಭೀರ ಕಾಯಿಲೆಯಲ್ಲ. ಇದಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡುತ್ತಿದ್ದು, ಬೇಕಿರುವ ಔಷಧ ಕೂಡ ಲಭ್ಯವಾಗಿದೆ. ಇಲ್ಲವಾದರೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ ಸಂಗ್ರಹಿಟ್ಟುಕೊಳ್ಳುವಂತೆ ತಿಳಿಸಲಾಗಿದೆ” ಎಂದು ಡಾ. ಸುರೇಂದ್ರ ಬಾಬು, ಜಿಲ್ಲಾ ಆರೋಗ್ಯಾಧಿಕಾರಿ ಅವರಿಂದ ಮಾಹಿತಿ ನೀಡಲಾಗಿದೆ.






