ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ನಟಿ ರಾಧಿಕಾ ಕುಮಾರಸ್ವಾಮಿ ಎರಡು ಕೋಟಿ ರೂಪಾಯಿ ಸಾಲ ನೀಡಿದ್ದರು ಎನ್ನುವ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ದಶಕದ ಹಿಂದೆ ಜಮೀರ್ ಅಹಮ್ಮದ್ ಖಾನ್ ಆರ್ಥಿಕ ಸಂಕಷ್ಟದಲ್ಲಿದ್ದಾಗ, ರಾಧಿಕಾ ಕುಮಾರಸ್ವಾಮಿ ₹2 ಕೋಟಿ ರೂಪಾಯಿ ನೆರವು ನೀಡಿದ ವಿಚಾರ ಲೋಕಾಯುಕ್ತ ವಿಚಾರಣೆಯಿಂದ ಹೊರಬಂದಿದೆ.
ಅಕ್ರಮ ಆಸ್ತಿ ಪ್ರಕರಣದ ತನಿಖೆಯ ವೇಳೆ, ಲೋಕಾಯುಕ್ತ ಪೊಲೀಸರು ಸಚಿವರ ಆದಾಯ ಮೂಲಗಳನ್ನು ಪರಿಶೀಲಿಸಿ ಸಾಲ ಕೊಟ್ಟವರ ಪಟ್ಟಿಯನ್ನು ಪತ್ತೆಹಚ್ಚಿದರು. ಆ ಪಟ್ಟಿಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರೂ ಕಂಡುಬಂದಿತ್ತು. ಇದರಿಂದಾಗಿ ಅವರಿಗೆ ನೋಟಿಸ್ ನೀಡಿ, ಅವರ ವಿವರಣೆ ಪಡೆದುಕೊಂಡಿದ್ದಾರೆ. ರಾಧಿಕಾ ಅವರು ಜಮೀರ್ ಅವರಿಗೆ ಸಾಲ ನೀಡಿದ್ದನ್ನು ಒಪ್ಪಿಕೊಂಡು ಅಧಿಕೃತ ಹೇಳಿಕೆಗೆ ಸಹಿ ಹಾಕಿದ್ದಾರೆ
2019ರಲ್ಲಿ ಐ ಮಾನಿಟರಿ ಅಡ್ವೈಸರಿ ಕಂಪನಿಯ ಭಾರೀ ವಂಚನೆ ಹಗರಣ ಬಯಲಿಗೆ ಬಂದ ನಂತರ, ಆ ಕಂಪನಿಯ ಜೊತೆಗಿನ ಸಂಪರ್ಕದ ಆರೋಪದ ಮೇರೆಗೆ ಜಮೀರ್ ಖಾನ್ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತ್ತು. ನಂತರ, ED ವರದಿ ಆಧರಿಸಿ ಅಂದಿನ ಮೈತ್ರಿ ಸರ್ಕಾರದ ಸಚಿವರಾಗಿದ್ದ ಜಮೀರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ದಾಖಲಿಸಿತ್ತು. ಎಸಿಬಿ ರದ್ದಾದ ಬಳಿಕ, ಈ ಪ್ರಕರಣ ಲೋಕಾಯುಕ್ತ ಪೊಲೀಸರ ವಶಕ್ಕೆ ಬಂದು, ಇದೀಗ ಅವರು ತನಿಖೆ ಮುಂದುವರಿಸಿದ್ದಾರೆ. ಈ ಹಿನ್ನೆಲೆ ಸಚಿವರ ಜೊತೆ ಇನ್ನಿತರರ ವಿಚಾರಣೆಯೂ ನಡೆದಿದೆ.
ಸಚಿವ ಜಮೀರ್ ತಾವು ಪಡೆದ ಸಾಲದ ವಿವರಗಳನ್ನು ಲೋಕಾಯುಕ್ತರಿಗೆ ಸಲ್ಲಿಸಿದ ಪಟ್ಟಿಯಲ್ಲಿ, ನಟಿ ರಾಧಿಕಾ ಕುಮಾರಸ್ವಾಮಿ ಅವರಿಂದ ಎರಡು ಕೋಟಿ ರೂಪಾಯಿ ಪಡೆದಿದ್ದಾಗಿ ಉಲ್ಲೇಖಿಸಿದ್ದರು. ಇದನ್ನು ಆಧರಿಸಿ ಲೋಕಾಯುಕ್ತರು ರಾಧಿಕಾಗೆ ನೋಟಿಸ್ ನೀಡಿದರು. ವಿಚಾರಣೆಗೆ ಹಾಜರಾದ ಅವರು, ಜಮೀರ್ ಅವರಿಗೆ ಕಷ್ಟದ ಸಂದರ್ಭದಲ್ಲಿ ನೆರವಾಗಲು ಆರ್ಥಿಕ ಸಹಾಯವಾಗಿ ಸಾಲ ನೀಡಿದ್ದಾಗಿ ಬರೆದ ಹೇಳಿಕೆ ನೀಡಿದ್ದಾರೆ.
“ನಾನು 2012ರಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಮ್ಯಾ ಅಭಿನಯದಲ್ಲಿ ಶಮಿಕಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದೆ. ಮನರಂಜನಾ ಚಾನೆಲ್‌ಗಳಿಗೆ ಈ ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಚಲನಚಿತ್ರದ ಯಶಸ್ವಿನಿಂದ ಸಂಪಾದಿಸಿದ ಹಣದಲ್ಲಿ ₹2 ಕೋಟಿಯನ್ನು ಸಚಿವರಿಗೆ ನೀಡಿದ್ದೆ” ಎಂದು ರಾಧಿಕಾ ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ.
ಈ ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ತಮ್ಮ ಹೇಳಿಕೆಗೆ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ರಾಧಿಕಾ ಅವರಿಗೆ ಸೂಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಸಚಿವರಿಗೆ ನೀಡಿದ್ದ ಹಣದ ಕುರಿತು ಮತ್ತಷ್ಟು ದಾಖಲೆಗಳನ್ನು ಕೊಡುವುದಾಗಿ ಹೇಳಿದ್ದಾರೆ.
ಸಚಿವ ಜಮೀರ್ ಪಡೆದಿದ್ದ ಸಾಲಗಳ ಪಟ್ಟಿಯಲ್ಲಿ ಮಾಜಿ ಸಂಸದ ಹಾಗೂ ಜೆಡಿಎಸ್ ನಾಯಕ ಕುಪ್ಪೇಂದ್ರ ರೆಡ್ಡಿ ಅವರ ಹೆಸರು ಸಹ ಕಾಣಿಸಿಕೊಂಡಿದೆ. ಅವರು ಜಮೀರ್‌ಗೆ ₹1 ಕೋಟಿ ಸಾಲ ನೀಡಿದ್ದರೆಂದು ಉಲ್ಲೇಖಿಸಲಾಗಿದೆ. ಲೋಕಾಯುಕ್ತರು ಈಗಾಗಲೇ ಅವರಿಗೆ ನೋಟಿಸ್ ಕಳುಹಿಸಿದರೂ, ಈವರೆಗೂ ಪ್ರತಿಕ್ರಿಯೆ ಸಿಕ್ಕಿಲ್ಲ. ಜಮೀರ್ ತಮ್ಮ ಸಾರಿಗೆ ಮತ್ತು ಇತರ ವ್ಯವಹಾರಗಳಿಗಾಗಿ ರಾಧಿಕಾ, ಕುಪ್ಪೇಂದ್ರ ಸೇರಿದಂತೆ ಹಲವರಿಂದ ಸಾಲ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.






