---Advertisement---

ನಾಯಿ ಕಚ್ಚಿದ ಎಮ್ಮೆಯ ಹಾಲಿನಿಂದ ತಯಾರಿಸಿದ ರೈತಾ ಸೇವನೆ; ಗ್ರಾಮದಲ್ಲಿ 200 ಮಂದಿಗೆ ರೇಬೀಸ್ ಲಸಿಕೆ

On: December 30, 2025 2:36 PM
Follow Us:
---Advertisement---

(ಉತ್ತರ ಪ್ರದೇಶ): ನಾಯಿ ಕಡಿತದಿಂದ ಮೃತಪಟ್ಟ ಎಮ್ಮೆಯ ಹಾಲಿನಿಂದ ತಯಾರಿಸಲಾದ ರೈತಾ ಸೇವಿಸಿದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದ ಸುಮಾರು 200 ನಿವಾಸಿಗಳಲ್ಲಿ ರೇಬೀಸ್ ಸೋಂಕಿನ ಆತಂಕ ಮೂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರಿಗೂ ರೇಬೀಸ್ ವಿರೋಧಿ ಲಸಿಕೆ ನೀಡಲಾಗಿದೆ.

ಗ್ರಾಮಸ್ಥರ ಮಾಹಿತಿ ಪ್ರಕಾರ, ಡಿಸೆಂಬರ್ 23ರಂದು ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯ ವೇಳೆ ಊಟದೊಂದಿಗೆ ರೈತಾವನ್ನು ಬಡಿಸಲಾಗಿತ್ತು. ಈ ರೈತಾವನ್ನು ಎಮ್ಮೆಯ ಹಾಲಿನಿಂದ ತಯಾರಿಸಲಾಗಿದ್ದು, ಆ ಎಮ್ಮೆ ಕೆಲವು ದಿನಗಳ ಹಿಂದೆ ನಾಯಿ ಕಡಿತಕ್ಕೆ ಒಳಗಾಗಿ ಅಸ್ವಸ್ಥಗೊಂಡು ಡಿಸೆಂಬರ್ 26ರಂದು ಸಾವನ್ನಪ್ಪಿತ್ತು. ಈ ವಿಷಯ ತಿಳಿದ ಬಳಿಕ ಆತಂಕಗೊಂಡ ಗ್ರಾಮಸ್ಥರು ಉಜ್ನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ವೈದ್ಯಾಧಿಕಾರಿ ಡಾ. ರಾಮೇಶ್ವರ ಮಿಶ್ರಾ, “ಗ್ರಾಮದಲ್ಲಿ ಹುಚ್ಚು ನಾಯಿ ಕಡಿತಕ್ಕೆ ಒಳಗಾದ ಎಮ್ಮೆ ರೇಬೀಸ್ ಲಕ್ಷಣಗಳಿಂದ ಸಾವನ್ನಪ್ಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದೇ ಎಮ್ಮೆಯ ಹಾಲಿನಿಂದ ತಯಾರಿಸಲಾದ ರೈತಾ ಸೇವಿಸಿರುವ ಕಾರಣ, ಯಾವುದೇ ಸಂಭಾವ್ಯ ಅಪಾಯವನ್ನು ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ಗ್ರಾಮಸ್ಥರಿಗೆ ರೇಬೀಸ್ ವಿರೋಧಿ ಲಸಿಕೆ ನೀಡಲಾಗಿದೆ. ಸಾಮಾನ್ಯವಾಗಿ ಹಾಲನ್ನು ಕುದಿಸಿದ ಬಳಿಕ ರೇಬೀಸ್ ಸೋಂಕಿನ ಅಪಾಯ ಇರುವುದಿಲ್ಲ. ಆದರೂ ಸುರಕ್ಷತೆಯ ದೃಷ್ಟಿಯಿಂದ ಲಸಿಕೆ ನೀಡಲಾಗಿದೆ” ಎಂದು ತಿಳಿಸಿದರು.

ಆರೋಗ್ಯ ಇಲಾಖೆಯ ಪ್ರಕಾರ, ಗ್ರಾಮದಲ್ಲಿ ಈವರೆಗೆ ಯಾವುದೇ ರೋಗ ಹರಡುವ ಪ್ರಕರಣಗಳು ವರದಿಯಾಗಿಲ್ಲ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಉಜ್ನಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯಲು ಬಂದ ಎಲ್ಲರಿಗೂ ತಕ್ಷಣವೇ ಚಿಕಿತ್ಸೆ ನೀಡಲಾಗಿದೆ. ಅಗತ್ಯದ ಹಿನ್ನೆಲೆ ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿತ್ತು.

ಸೋಂಕು ಸಂಬಂಧಿತ ವದಂತಿಗಳು ಅಥವಾ ಅನಗತ್ಯ ಭೀತಿ ಹರಡದಂತೆ ಗ್ರಾಮದಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮಸ್ಥ ಧರ್ಮಪಾಲ್ ಮಾತನಾಡಿ, “ಎಮ್ಮೆ ನಾಯಿ ಕಡಿತದಿಂದ ಅನಾರೋಗ್ಯಕ್ಕೆ ಒಳಗಾಗಿತ್ತು. ಅದೇ ಎಮ್ಮೆಯ ಹಾಲಿನಿಂದ ರೈತಾ ತಯಾರಿಸಲಾಯಿತು ಎಂಬ ಮಾಹಿತಿ ಬಂದ ಬಳಿಕ ಗ್ರಾಮದಲ್ಲಿ ಭಯ ಉಂಟಾಯಿತು. ಮುನ್ನೆಚ್ಚರಿಕೆಯಾಗಿ ಎಲ್ಲರಿಗೂ ರೇಬೀಸ್ ಇಂಜೆಕ್ಷನ್ ನೀಡಲಾಗಿದೆ” ಎಂದು ಹೇಳಿದರು.

Join WhatsApp

Join Now

RELATED POSTS

1 thought on “ನಾಯಿ ಕಚ್ಚಿದ ಎಮ್ಮೆಯ ಹಾಲಿನಿಂದ ತಯಾರಿಸಿದ ರೈತಾ ಸೇವನೆ; ಗ್ರಾಮದಲ್ಲಿ 200 ಮಂದಿಗೆ ರೇಬೀಸ್ ಲಸಿಕೆ”

Comments are closed.