ಕಲಬುರಗಿ:
ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿಯಾಗಿರುವ ಆರ್.ಡಿ. ಪಾಟೀಲ್ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮತ್ತೆ ವಿವಾದಕ್ಕೆ ಕಾರಣವಾಗಿದ್ದಾರೆ. ಜೈಲು ಸಿಬ್ಬಂದಿಯೊಂದಿಗೆ ತಪಾಸಣೆ ವೇಳೆ ಅವರು ಕಿರಿಕ್ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ಹಿರಿಯ ಅಧಿಕಾರಿಗಳ ಸೂಚನೆಯಂತೆ ಜೈಲು ಸಿಬ್ಬಂದಿ ಬ್ಯಾರೆಕ್ ತಪಾಸಣೆ ನಡೆಸುತ್ತಿದ್ದಾಗ, ಆರ್.ಡಿ. ಪಾಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ನನ್ನ ಬ್ಯಾರೆಕ್ ತಪಾಸಣೆಗೆ ಅನುಮತಿ ಇದೆಯೇ?” ಎಂದು ಪ್ರಶ್ನಿಸಿದ ಅವರು, ಅನುಮತಿ ಇಲ್ಲದೆ ತಪಾಸಣೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಜೈಲು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್. ಅನಿತಾ ಅವರು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿಂದೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗುವ ಸಂದರ್ಭದಲ್ಲಿಯೂ ಆರ್.ಡಿ. ಪಾಟೀಲ್ ಜೈಲು ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಆ ವೇಳೆ ಪರಸ್ಪರ ವಾಗ್ವಾದದ ಜೊತೆಗೆ ನೂಕಾಟ–ತಳ್ಳಾಟ ನಡೆದಿದ್ದು, ಜೈಲು ಅಧಿಕಾರಿಗಳು ಹಾಗೂ ಆರ್.ಡಿ. ಪಾಟೀಲ್ ಇಬ್ಬರೂ ಪರಸ್ಪರ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರತ್ಯೇಕ ಪ್ರಕರಣಗಳೂ ದಾಖಲಾಗಿವೆ.
ನಿರಂತರ ವಿವಾದಗಳ ಹಿನ್ನೆಲೆ ಆರ್.ಡಿ. ಪಾಟೀಲರನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.






