ರಾಜಕೀಯ ವೈಷಮ್ಯವನ್ನು ಬದಿಗಿರಿಸಿ, ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಮೂಲಕ ವಿಶಿಷ್ಟ ರಾಜಕೀಯ ನಡೆಗೆ ಮುಂದಾಗಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ತಮ್ಮ ರಾಜಕೀಯ ಪ್ರತಿಸ್ಪರ್ಧಿ ಸಂಸದ ಡಾ. ಕೆ. ಸುಧಾಕರ್ ಅವರ ತಾಯಿಯ ಹೆಸರಿನಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಇದರ ಜೊತೆಗೆ, ತಮ್ಮನ್ನು ‘ಜೋಕರ್’ ಎಂದು ಟೀಕಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಅವರದೇ ಕ್ಷೇತ್ರ ವಿಜಯಪುರಕ್ಕೆ ಬಂದು ಸ್ಪರ್ಧಿಸುವ ನೇರ ಸವಾಲು ಹಾಕಿದ್ದಾರೆ. ತಾಲೂಕಿನ ಬೊಮ್ಮೆಗಾನಹಳ್ಳಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವಂತಹ ಹೇಳಿಕೆಗಳನ್ನು ನೀಡಿದರು.
ಸಂಸದ ಡಾ. ಕೆ. ಸುಧಾಕರ್ ಅವರ ತಾಯಿ ದಿವಂಗತ ಶಾಂತಮ್ಮ ಅವರೊಂದಿಗಿನ ವೈಯಕ್ತಿಕ ಸಂಬಂಧವನ್ನು ಸ್ಮರಿಸಿದ ಪ್ರದೀಪ್ ಈಶ್ವರ್, “ಶಾಂತಮ್ಮ ಅವರು ನನಗೂ ತಾಯಿಯ ಸಮಾನ. ಅವರು ನನಗೆ ಪ್ರೀತಿಯಿಂದ ಊಟ ಹಾಕಿದ್ದಾರೆ. ಅವರಿಗೆ ಹೃದಯಾಘಾತವಾದಾಗ ಆರೂರಿನ ಮೆಡಿಕಲ್ ಕಾಲೇಜು ಬಳಿ ಮಾರ್ಗಮಧ್ಯೆ ಕೊನೆಯುಸಿರೆಳೆದರು. ಆ ನೋವು ನನಗೂ ಇದೆ. ಹೀಗಾಗಿ, ಮೆಡಿಕಲ್ ಕಾಲೇಜು ಆವರಣದಲ್ಲಿಯೇ ಅವರ ನೆನಪಿಗಾಗಿ ‘ಶಾಂತಮ್ಮ ಕಾರ್ಡಿಯಾಕ್ ಕೇರ್ ಸೆಂಟರ್’ ನಿರ್ಮಿಸುವ ಸಂಕಲ್ಪ ಮಾಡಿದ್ದೇನೆ. ಅದರ ಉದ್ಘಾಟನೆಗೆ ನಾನೇ ಖುದ್ದಾಗಿ ಹೋಗಿ ಸಂಸದ ಸುಧಾಕರ್ ಅವರನ್ನು ಆಹ್ವಾನಿಸುತ್ತೇನೆ” ಎಂದು ಭಾವುಕರಾಗಿ ನುಡಿದರು.
“ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಈಗಾಗಲೇ 80 ಕೋಟಿ ರೂಪಾಯಿಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. ಸುಧಾಕರ್ ಅವರು ಒಳ್ಳೆಯ ಕೆಲಸ ಮಾಡಿದರೆ ನಾನು ಗೌರವಿಸುತ್ತೇನೆ, ನಾನು ಮಾಡಿದಾಗ ಅವರು ಗೌರವಿಸಲಿ” ಎಂದು ಹೇಳುವ ಮೂಲಕ ಅಭಿವೃದ್ಧಿ ರಾಜಕಾರಣಕ್ಕೆ ಒತ್ತು ನೀಡಿದರು.
ಸಿದ್ದರಾಮಯ್ಯ ಸರ್ಕಾರಕ್ಕೆ ಗೋಮಾತೆಯ ಶಾಪ ತಟ್ಟಲಿದೆ ಎಂಬ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, “ಈಶ್ವರಪ್ಪನವರು ಮೊದಲು ಯಡಿಯೂರಪ್ಪನವರನ್ನು ಬೀದಿಯಲ್ಲಿ ನಿಂದಿಸುವುದನ್ನು ನಿಲ್ಲಿಸಲಿ. ಪಕ್ಷದ ಆಂತರಿಕ ವಿಚಾರವನ್ನು ಬೀದಿಗೆ ತಂದಿದ್ದಕ್ಕೆ ಅವರನ್ನೇ ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಮೊದಲು ಅವರು ಪಕ್ಷದ ಸದಸ್ಯತ್ವವನ್ನು ವಾಪಸ್ ಪಡೆಯಲಿ, ಆಮೇಲೆ ಗೋಹತ್ಯೆ ಶಾಪದ ಬಗ್ಗೆ ಮಾತನಾಡಲಿ” ಎಂದು ತಿರುಗೇಟು ನೀಡಿದರು.
ವಿಧಾನಸೌಧಕ್ಕೆ ಜೋಕರ್‌ಗಳು ಆಯ್ಕೆಯಾಗುತ್ತಿದ್ದಾರೆ ಎಂಬ ಯತ್ನಾಳ್ ಹೇಳಿಕೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಪ್ರದೀಪ್ ಈಶ್ವರ್, “ಹೌದು, ನಾನು ಜೋಕರೇ. ಜನರ ನೋವನ್ನು ಮರೆಸಿ, ಅವರಿಗೆ ನಗು ಮತ್ತು ಸಂತೋಷ ನೀಡುವವನೇ ನಿಜವಾದ ಜೋಕರ್. ಆದರೆ ಇಷ್ಟು ದಿನ ವಿಧಾನಸೌಧಕ್ಕೆ ಬ್ರೋಕರ್‌ಗಳು ಆಯ್ಕೆಯಾಗಿ ಬರುತ್ತಿದ್ದರು, ಈಗ ಜೋಕರ್‌ಗಳು ಬರುತ್ತಿದ್ದೇವೆ. ಆ ಬ್ರೋಕರ್‌ಗಳು ಯಾರೆಂಬುದನ್ನು ಯತ್ನಾಳ್ ಅವರನ್ನೇ ಕೇಳಿ ತಿಳಿಯಬೇಕು” ಎಂದು ವ್ಯಂಗ್ಯವಾಡಿದರು.
ಮಾತು ಮುಂದುವರಿಸಿದ ಅವರು, “ಯತ್ನಾಳ್ ನನ್ನ ವಿರುದ್ಧ ಸ್ಪರ್ಧಿಸುವುದು ಬೇಡ, ನಾನೇ ಅವರ ವಿರುದ್ಧ ವಿಜಯಪುರಕ್ಕೆ ಬಂದು ಸ್ಪರ್ಧಿಸುತ್ತೇನೆ. ಅವರಿಗೆ ಕನಿಷ್ಠ ಡೆಪಾಸಿಟ್ ಕೂಡ ಸಿಗದಂತೆ ಮಾಡುತ್ತೇನೆ. 40 ವರ್ಷಗಳಿಂದ ಶಾಸಕರಾಗಿರುವ ಅವರು ತಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದು ಕೇವಲ ಒಂದು ಆಂಬುಲೆನ್ಸ್. ನಾನು ಒಂದೇ ವರ್ಷದಲ್ಲಿ ನನ್ನ ಕ್ಷೇತ್ರಕ್ಕೆ 10 ಆಂಬುಲೆನ್ಸ್‌ಗಳನ್ನು ನೀಡಿದ್ದೇನೆ” ಎಂದು ತಮ್ಮ ಮತ್ತು ಯತ್ನಾಳ್ ಕಾರ್ಯವೈಖರಿಯನ್ನು ಹೋಲಿಸಿದರು.
ನಾನು ಶಾಸಕನಾದ ದಿನದಿಂದ 200ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಬಗೆಹರಿಸಿದ್ದೇನೆ, 500ಕ್ಕೂ ಹೆಚ್ಚು ಬೋರ್‌ವೆಲ್‌ಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೊಟ್ಟಿದ್ದೇನೆ. ಯತ್ನಾಳ್ ಒಂದೇ ಒಂದು ಹಳ್ಳಿಗಾದರೂ ಭೇಟಿ ನೀಡಿದ್ದಾರೆಯೇ? ಇಷ್ಟೆಲ್ಲಾ ನೋಡಿದರೆ ನಾನು ವಿಜಯಪುರದಲ್ಲಿ ನಿಂತರೆ ನನ್ನ ಗೆಲುವು ಶತಸಿದ್ಧ. 2018ಕ್ಕೆ ನಾನೇ ಮುಖ್ಯಮಂತ್ರಿ ಎಂದು ಯತ್ನಾಳ್ ತಿರುಕನ ಕನಸು ಕಾಣುತ್ತಿದ್ದಾರೆ, ಎಂದು ಲೇವಡಿ ಮಾಡಿದರು.






