---Advertisement---

ನಮ್ಮಿಂದ ಬೆಳೆದವರಿಗೆ ಈಗ ನಾವು ಬೇಡ, ಗೇಟ್‌ನಿಂದ ಹೊರಗೆ ನಿಲ್ಲಿಸ್ತಾರೆ: ರಾಕ್‌ಲೈನ್ ವೆಂಕಟೇಶ್

On: December 9, 2025 1:27 PM
Follow Us:
---Advertisement---

ಬೆಂಗಳೂರು: ಕನ್ನಡ ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆ ಖ್ಯಾತ ನಿರ್ದೇಶಕ–ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಗಂಭೀರ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಅವರ ‘ಮಾರ್ಕ್’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಕನ್ನಡ ಸಿನಿಮಾಗಳನ್ನು ಒಟಿಟಿ ವೇದಿಕೆಗಳು ನಿರ್ಲಕ್ಷಿಸುತ್ತಿರುವ ಕುರಿತು ತಮ್ಮ ಅಸಮಾಧಾನವನ್ನು ವೇದಿಕೆಯಲ್ಲೇ ಹೊರಹಾಕಿದರು.

“ಅಂದು ನಮ್ಮಿಂದ ಬೆಳೆದವರೇ ಇಂದು ನಮ್ಮನ್ನೇ ಗೇಟ್‌ನಿಂದ ಹೊರಗೆ ನಿಲ್ಲಿಸುತ್ತಿದ್ದಾರೆ. ನಮ್ಮಿಂದ ಬೆಳೆದವರಿಗೆ ಈಗ ನಾವು ಬೇಕಾಗಿಲ್ಲ. ಕನ್ನಡ ಚಿತ್ರರಂಗದ ಆದಾಯಕ್ಕೆ ಎರಡು ಮಾತ್ರ ಮೂಲಗಳಿವೆ — ಬಾಕ್ಸಾಫೀಸ್ ಮತ್ತು ಒಟಿಟಿ. ಇಂದಿನ ದಿನಗಳಲ್ಲಿ ಒಟಿಟಿಯೇ ದೊಡ್ಡ ಅವಲಂಬನೆ. ಆದರೆ ಸದ್ಯ ಕನ್ನಡಕ್ಕೆ ಒಟಿಟಿ ಬಾಗಿಲೇ ಕ್ಲೋಸ್ ಆಗಿದೆ. ಕನ್ನಡ ಸಿನಿಮಾಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ಓಪನ್ ಆಗಿಯೇ ಹೇಳುತ್ತಿದ್ದಾರೆ” ಎಂದು ರಾಕ್‌ಲೈನ್ ಅಸಮಾಧಾನ ವ್ಯಕ್ತಪಡಿಸಿದರು.

“ಮೊದಲಿಗೆ ಒಟಿಟಿಯವರು ನಮ್ಮ ಕನ್ನಡ ಸಿನಿಮಾಗಳನ್ನು ಬಾಚಿ ತಬ್ಬಿಕೊಂಡರು. ಆಗ ನಮಗೆ ದೊಡ್ಡ ಶಕ್ತಿ ಸಿಕ್ಕಂತೆ ಅನ್ನಿಸಿತ್ತು. ಆದರೆ ಈಗ ನಮ್ಮನ್ನ ಗೇಟ್‌ನ ಹೊರಗೇ ನಿಲ್ಲಿಸಿದ್ದಾರೆ. ಒಳಗೆ ಪ್ರವೇಶ ಪಡೆಯಬೇಕಾದರೂ ಅಪಾಯಿಂಟ್‌ಮೆಂಟ್ ಬೇಕಾದ ಸ್ಥಿತಿ ಬಂದಿದೆ. ಅಂದು ನಮ್ಮಿಂದ ಚೆನ್ನಾಗಿ ಬೆಳೆದವರು ಈಗ ನಮಗೆ ಅಗತ್ಯವಿಲ್ಲ ಎನ್ನುವಂತಾಗಿದೆ” ಎಂದು ಅವರು ಬೇಸರ ತೋಡಿಕೊಂಡರು.

ವರ್ಷಕ್ಕೆ ಎರಡು ಸಿನಿಮಾ ಮಾಡಿ ಒಟಿಟಿಗೆ ಪಾಠ ಕಲಿಸೋಣ

ಈ ಸಮಸ್ಯೆ ಕನ್ನಡಕ್ಕೆ ಮಾತ್ರ ಸೀಮಿತವಲ್ಲ, ಬೇರೆ ಭಾಷೆಗಳಲ್ಲೂ ಇದೆ ಎಂದ ಅವರು, “ಇದೀಗ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಒಂದು ಸೆಟ್ ಆಗಬೇಕು. ಒಟಿಟಿಯವರಿಗೆ ಪಾಠ ಕಲಿಸಲು ಎಲ್ಲ ಕನ್ನಡ ನಿರ್ದೇಶಕರು ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡಿ. ಆಗ ಒಟಿಟಿಯವರೇ ಮತ್ತೆ ನಮ್ಮನ್ನು ಹುಡುಕಿಕೊಂಡು ಬರುತ್ತಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರೇಕ್ಷಕರಿಗೆ ರಾಕ್‌ಲೈನ್ ಮನವಿ

ಕರ್ನಾಟಕದ ಪ್ರೇಕ್ಷಕರಿಗೆ ಮನವಿ ಮಾಡಿದ ರಾಕ್‌ಲೈನ್ ವೆಂಕಟೇಶ್, “ಯಾವ ನಟನ ಫ್ಯಾನ್ ಆಗಿದ್ದರೂ ಮೊದಲು ಇದು ಕನ್ನಡ ಎನ್ನುವುದನ್ನು ಮರೆಯಬೇಡಿ. ಆ ಹೀರೋ, ಈ ಹೀರೋ ಎನ್ನುವುದಕ್ಕಿಂತ ಇದು ಕನ್ನಡ ಸಿನಿಮಾ ಎನ್ನುವ ಭಾವನೆ ಮುಖ್ಯ. ಎಲ್ಲ ಕನ್ನಡ ಸಿನಿಮಾಗಳನ್ನೂ ಬೆಳೆಸಬೇಕು. ಸಿನಿಮಾಗಳನ್ನು ಥಿಯೇಟರ್‌ಗಳಲ್ಲೇ ನೋಡಿ. ಇದರಿಂದ ಲಕ್ಷಾಂತರ ಜನರ ಬದುಕಿಗೆ ಆಸರೆಯಾಗುತ್ತದೆ. ಪೈರಸಿಯಲ್ಲಿ ಸಿನಿಮಾ ನೋಡುವುದು ಕನ್ನಡ ಚಿತ್ರರಂಗವನ್ನು ನಾಶಮಾಡುತ್ತದೆ. ಹೀಗಾಗಿ ಎಲ್ಲರೂ ಕನ್ನಡ ಸಿನಿಮಾಗಳನ್ನು ಹೆಚ್ಚು ನೋಡಿ, ಬೆಂಬಲಿಸಿ. ಇದೇ ನನ್ನ ಮನವಿ” ಎಂದು ಹೇಳಿದರು.

Join WhatsApp

Join Now

RELATED POSTS