---Advertisement---

20 ವರ್ಷದ ರಾಜಕೀಯ ಪಯಣದ ಫಲ: ಬಿಜೆಪಿ ಚುಕ್ಕಾಣಿ ಹಿಡಿದ ನಿತಿನ್ ನಬೀನ್

On: January 20, 2026 4:56 AM
Follow Us:
---Advertisement---

ನವದೆಹಲಿ: ಅಚ್ಚರಿಯ ಆಯ್ಕೆಗಳಿಗೆ ಹೆಸರಾದ ಬಿಜೆಪಿ, ಈ ಬಾರಿ ಕೂಡ ತನ್ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರೂ ನಿರೀಕ್ಷಿಸದ ಬಿಹಾರದ ಯುವ ನಾಯಕ ನಿತಿನ್ ನಬೀನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಸಂಘಟನಾ ಸಾಮರ್ಥ್ಯ, ಸಮೂಹ ನಾಯಕತ್ವ ಮತ್ತು ತಂತ್ರಜ್ಞಾನದ ದೃಷ್ಟಿಯಿಂದ ಪಕ್ಷದ ಚುಕ್ಕಾಣಿಯನ್ನು ನಿಪುಣ ನಾಯಕನ ಕೈಗೆ ಒಪ್ಪಿಸಲಾಗಿದೆ.

ನಿತಿನ್ ನಬೀನ್ ಅವರಿಗೆ ಈ ಅವಕಾಶ ಏಕಾಏಕಿ ಒಲಿದು ಬಂದ ಅದೃಷ್ಟವಲ್ಲ. ಅವರ ರಾಜಕೀಯ ಪಯಣಕ್ಕೆ ಸರಿಯಾಗಿ 20 ವರ್ಷಗಳ ಇತಿಹಾಸವಿದೆ. ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಎಬಿವಿಪಿ ಮೂಲಕ ಬಿಜೆಪಿ ಸಂಪರ್ಕಕ್ಕೆ ಬಂದ ಅವರು, 2000ರಲ್ಲಿ ರಾಜಕೀಯ ಜೀವನಕ್ಕೆ ಅಧಿಕೃತವಾಗಿ ಕಾಲಿಟ್ಟರು. ಪಕ್ಷದ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಪರಿಣಾಮ ವಿದ್ಯಾಭ್ಯಾಸವನ್ನು ತ್ಯಜಿಸಿದ ನಿತಿನ್, ಶೀಘ್ರದಲ್ಲೇ ಬಿಹಾರ ಬಿಜೆಪಿಯ ಯುವ ನಾಯಕರಾಗಿ ಗುರುತಿಸಿಕೊಂಡರು. ರಾಜಕೀಯ ಹಿನ್ನೆಲೆಯೂ ಅವರಿಗೆ ಹೊಸದಾಗಿರಲಿಲ್ಲ. ಕಾಯಸ್ಥ ಸಮುದಾಯಕ್ಕೆ ಸೇರಿದ ಅವರ ತಂದೆ, ಹಿರಿಯ ಬಿಜೆಪಿ ನಾಯಕ ದಿವಂಗತ ನಬಿನ್ ಕಿಶೋರ್ ಸಿನ್ಹಾ ಅವರಾಗಿದ್ದರು.

ಬಂಕಿಪುರದಿಂದ ರಾಜಕೀಯ ಗೆಲುವಿನ ಆರಂಭ

2006ರಲ್ಲಿ ಕೇವಲ 26ರ ಹರೆಯದಲ್ಲಿದ್ದ ನಿತಿನ್, ತಮ್ಮ ತಂದೆಯವರ ಕ್ಷೇತ್ರವಾದ ಪಟನಾದ ಬಂಕಿಪುರದಿಂದ ಮೊದಲ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದರು. ಬಳಿಕ ಅದೇ ಕ್ಷೇತ್ರವನ್ನು ಪ್ರತಿನಿಧಿಸಿ ಐದು ಬಾರಿ ಶಾಸಕರಾಗಿ (ಸತತ ನಾಲ್ಕು ಬಾರಿ) ಆಯ್ಕೆಯಾಗಿದ್ದರು. ಈ ಅವಧಿಯಲ್ಲಿ ಅವರು ಲೋಕೋಪಯೋಗಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸುದೀರ್ಘ ರಾಜಕೀಯ ಅನುಭವ ಹೊಂದಿರುವ ನಿತಿನ್ ನಬೀನ್, ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು ನೀಡುವ ನಾಯಕರಾಗಿ ಹೆಸರು ಮಾಡಿದ್ದಾರೆ. 2023ರ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಪಕ್ಷದ ಸಹ-ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿಯ ಭರ್ಜರಿ ಗೆಲುವಿಗೆ ಅವರು ಪ್ರಮುಖ ಪಾತ್ರವಹಿಸಿದರು. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷದ ಅಧಿಕಾರ ಮುಂದುವರಿಯಲು ಅವರ ಸಂಘಟನಾ ಕೌಶಲ್ಯ ನೆರವಾಯಿತು.

ಈ ಮೂಲಕ ಪಕ್ಷದ ಸಂಘಟನೆ ಮತ್ತು ಬಲವರ್ಧನೆಯಲ್ಲಿ ನಿತಿನ್ ನಬೀನ್ ವಿಶ್ವಾಸಾರ್ಹ ನಾಯಕನಾಗಿ ತಮ್ಮ ಸ್ಥಾನವನ್ನು ದೃಢಪಡಿಸಿಕೊಂಡಿದ್ದಾರೆ.

Join WhatsApp

Join Now

RELATED POSTS

Leave a Comment