ಬೆಂಗಳೂರು, ನವೆಂಬರ್ 20:
ನೆಲಮಂಗಲದ ಹೊರವಲಯದಲ್ಲಿ ಮಾಜಿ ಡಿವೈಎಸ್ಪಿಯವರ ಪುತ್ರಿ ಅನಿತಾ ಅವರು ಅತ್ತೆ–ಮಾವ ಹಾಗೂ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿರುವ ಘಟನೆ ಸಂಚಲನ ಸೃಷ್ಟಿಸಿದೆ. ವರದಕ್ಷಿಣೆ ಕಿರುಕುಳ, ಅಸಭ್ಯ ಹೇಳಿಕೆಗಳು ಹಾಗೂ ದೈಹಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಅನಿತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮದುವೆಯ 15 ದಿನಗಳಲ್ಲೇ ಕಿರುಕುಳ ಆರಂಭವಾಗಿದೆಯೇಂದು ಆರೋಪ
ಅನಿತಾ ಅವರು 2023ರ ನವೆಂಬರ್ 2ರಂದು ಡಾ. ಗೋವರ್ಧನ್ ಅವರನ್ನು ವೈಭವಯುತವಾಗಿ ಮದುವೆಯಾಗಿದ್ದರು. ಮಗಳ ಮದುವೆಗೆ ಅನಿತಾ ಅವರ ತಂದೆ ಸುಮಾರು ₹25 ಲಕ್ಷ ವೆಚ್ಚ ಮಾಡಿದ್ದಾರೆ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನಿಂದ ಕಿರುಕುಳ ಆರಂಭವಾಗಿದೆಯೆಂದು ದೂರು ಹೇಳುತ್ತದೆ.
ಗೋವರ್ಧನ್ ಅವರು ಅನಿತಾ ಅವರ ತಂದೆಯ ಆಸ್ತಿ ಮತ್ತು ಬಾಡಿಗೆ ಆದಾಯದಲ್ಲಿ ಪಾಲು ನೀಡುವಂತೆ ಒತ್ತಡ ಹೇರುತ್ತಿದ್ದರು. “ತಂದೆಯ ಆಸ್ತಿ ತಂದರೆ ನರ್ಸಿಂಗ್ ಹೋಂ ಆರಂಭಿಸಬಹುದು” ಎಂಬ ಕಾರಣ ನೀಡಿ ಗಂಡನು ಆಗಾಗ ಹಣಕ್ಕಾಗಿ ಒತ್ತಾಯಿಸುತ್ತಿದ್ದಾನೆಂದು ಅನಿತಾ ಆರೋಪಿಸಿದ್ದಾರೆ.
ಮಾವನಿಂದ ಅಶ್ಲೀಲ ಬೇಡಿಕೆಗಳ ಆರೋಪ
ಎಫ್ಐಆರ್ ಪ್ರಕಾರ, ಅನಿತಾ ಅವರ ಮಾವ ನಾಗರಾಜು ಅಶ್ಲೀಲವಾಗಿ ಮಾತನಾಡುತ್ತಿದ್ದರೆಂದೂ, ದೈಹಿಕವಾಗಿ ಕಿರುಕುಳ ನೀಡಿದರೆಂದೂ ದೂರಿನಲ್ಲಿ ಹೇಳಲಾಗಿದೆ.
ನಾಗರಾಜು ಅವರು,
“ಮದುವೆಗೆ ತಿಂಗಳುಗಳು ಆಯಿತು, ಯಾಕೆ ಇನ್ನೂ ಮಕ್ಕಳು ಮಾಡಿಕೊಂಡಿಲ್ಲ? ಸರಿಯಾಗಿ ಸಂಸಾರ ಮಾಡುತ್ತಿಲ್ಲವಾ? ಇಲ್ಲದಿದ್ದರೆ ನಾನು ಬರುತ್ತೇನೆ. ಮಾಡರ್ನ್ ಹುಡುಗಿಯಂತೆ ಅರ್ಧ ಬಟ್ಟೆ ಹಾಕಿಕೊಂಡು ಬಾ”
ಎಂದು ಅಸಭ್ಯವಾಗಿ ಹೇಳಿದ್ದಾಗಿ ಅನಿತಾ ತಿಳಿಸಿದ್ದಾರೆ.
ಈ ಬಗ್ಗೆ ಗಂಡ ಮತ್ತು ಅತ್ತೆಗೂ ತಿಳಿಸಿದಾಗ, “ಇದು ಮನೆಯ ವಿಷಯ, ನೀನೇ ಹೊಂದಿಕೊಳ್ಳಬೇಕು” ಎಂದು ನಿರ್ಲಕ್ಷ್ಯ ಮಾಡಿದರೆನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭ
ಗಂಡ, ಅತ್ತೆ ಮತ್ತು ಮಾವನಿಂದ ಆರ್ಥಿಕ ಹಾಗೂ ದೈಹಿಕ ಕಿರುಕುಳ ತಾಳಲಾರದೆ ಅನಿತಾ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈಗ ಪೊಲೀಸರು ಮೂವರನ್ನೂ ವಶಕ್ಕೆ ಪಡೆದು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.






