ಮುಂಬೈ ವುಮೆನ್ಸ್ ತಂಡದ ಆಲ್‌ರೌಂಡರ್ ನ್ಯಾಟ್ ಸಿವರ್ ಬ್ರಂಟ್ ಮಹಿಳಾ ಪ್ರೀಮಿಯರ್ ಲೀಗ್ (WPL) ಇತಿಹಾಸದಲ್ಲೇ ಮೊದಲ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಆರ್‌ಸಿಬಿ ವಿರುದ್ಧ ಶತಕ ಬಾರಿಸುವ ಮೂಲಕ ಡಬ್ಲುಪಿಎಲ್‌ನಲ್ಲಿ ನೂರು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ಇಂಗ್ಲೆಂಡ್‌ನ ಸ್ಟಾರ್ ಆಟಗಾರ್ತಿಯಾದ ನ್ಯಾಟ್ ಸಿವರ್ ಬ್ರಂಟ್ ಅವರ ವೈಯಕ್ತಿಕ ಜೀವನವೂ ಅನೇಕರಿಗೆ ಕುತೂಹಲ ಮೂಡಿಸುವಂತಿದೆ. 1992ರ ಆಗಸ್ಟ್ 20ರಂದು ಜಪಾನ್‌ನ ಟೋಕಿಯೋದಲ್ಲಿ ಜನಿಸಿದ ನ್ಯಾಟ್, ಉದ್ಯಮಿಯಾಗಿದ್ದ ತಂದೆಯ ಕಾರಣದಿಂದ ಬಾಲ್ಯವನ್ನು ಪೊಲ್ಯಾಂಡ್‌ನಲ್ಲಿ ಕಳೆದರು. ಬಳಿಕ ನೆದರ್‌ಲ್ಯಾಂಡ್‌ನಲ್ಲಿ ವಾಸಿಸುವ ವೇಳೆ ಫುಟ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್ ಆಡಿ ಹೆಸರು ಗಳಿಸಿದರು.
ಇದನ್ನು ಓದಿ: ಚಿಕ್ಕಬಳ್ಳಾಪುರ: ಅಣ್ಣ–ತಂಗಿಯ ಪವಿತ್ರ ಸಂಬಂಧಕ್ಕೆ ಧಕ್ಕೆ: ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ 21 ವರ್ಷದ ಯುವತಿ ನೇಣಿಗೆ ಶರಣು
ನಂತರ ಇಂಗ್ಲೆಂಡ್‌ನ ಸರ್ರೆ ರಾಜ್ಯದ ಎಪ್ಸಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಕ್ರಿಕೆಟ್ ಮೇಲೆ ಆಸಕ್ತಿ ಬೆಳೆಸಿಕೊಂಡರು. 2007ರಿಂದ 2011ರವರೆಗೆ ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅವರು ಕ್ರಿಕೆಟ್‌ನಲ್ಲಿ ಪರಿಣತಿ ಪಡೆದರು. 2013ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಇಂಗ್ಲಿಷ್ ಮಹಿಳಾ ಆಟಗಾರ್ತಿ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಪ್ರಸ್ತುತ ನ್ಯಾಟ್ ಸಿವರ್ ಬ್ರಂಟ್ ಅವರಿಗೆ 33 ವರ್ಷಗಳಾಗಿವೆ.
ಒಂದೇ ತಂಡದಲ್ಲಿ ಆಡುವಾಗಲೇ ನ್ಯಾಟ್ ಸಿವರ್ ಮತ್ತು ಹಿರಿಯ ಆಟಗಾರ್ತಿ ಕ್ಯಾಥರಿನ್ ಬ್ರಂಟ್ ನಡುವೆ ಆಪ್ತತೆ ಬೆಳೆದಿತು. 2019ರ ಅಕ್ಟೋಬರ್‌ನಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ ಅವರು ಅದೇ ವರ್ಷ ನಿಶ್ಚಿತಾರ್ಥ ಮಾಡಿಕೊಂಡರು. 2020ರಲ್ಲಿ ಮದುವೆಯಾಗಲು ನಿರ್ಧರಿಸಿದ್ದರೂ, ಕೊರೊನಾ ಮಹಾಮಾರಿಯ ಕಾರಣದಿಂದ ವಿವಾಹವನ್ನು ಮುಂದೂಡಬೇಕಾಯಿತು.
ಕೊನೆಗೆ 2022ರ ಮೇ ತಿಂಗಳಲ್ಲಿ ಸ್ನೇಹಿತರು ಹಾಗೂ ಆಪ್ತರ ಸಮ್ಮುಖದಲ್ಲಿ ನ್ಯಾಟ್ ಸಿವರ್ ಮತ್ತು ಕ್ಯಾಥರಿನ್ ಬ್ರಂಟ್ ವಿವಾಹವಾಗಿದರು. ಮದುವೆಯ ಬಳಿಕ ಇಬ್ಬರೂ ತಮ್ಮ ಹೆಸರಿನ ಕೊನೆಯಲ್ಲಿ “ಸಿವರ್ ಬ್ರಂಟ್” ಅನ್ನು ಸೇರಿಸಿಕೊಂಡರು. ನಂತರ ಕ್ಯಾಥರಿನ್ ಬ್ರಂಟ್ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದರು.
ವಿವಾಹವಾದ ಎರಡು ವರ್ಷಗಳ ಬಳಿಕ, 2024ರ ಸೆಪ್ಟೆಂಬರ್ 20ರಂದು ಕ್ಯಾಥರಿನ್ ಗರ್ಭಿಣಿಯಾಗಿರುವುದನ್ನು ದಂಪತಿ ಅಧಿಕೃತವಾಗಿ ಘೋಷಿಸಿದರು. 2025ರ ಮಾರ್ಚ್‌ನಲ್ಲಿ ಕ್ಯಾಥರಿನ್ ಒಬ್ಬ ಸುಂದರ ಗಂಡು ಮಗುವಿಗೆ ಜನ್ಮ ನೀಡಿದರು. ಸದ್ಯ ಈ ಲೇಡಿ ದಂಪತಿ ಸಂತೋಷಕರ ಜೀವನ ನಡೆಸುತ್ತಿದ್ದಾರೆ.





