ಕೆಲವರಿಗೆ ಎಷ್ಟೇ ಇದ್ದರೂ ತೃಪ್ತಿ ಸಿಗುವುದಿಲ್ಲ. ಇನ್ನೂ ಕೆಲವರು ತಮ್ಮ ಬಳಿ ಇರುವುದರಲ್ಲೇ ಸುಖವನ್ನು ಕಾಣುವ ಮನಸ್ಥಿತಿಯವರಾಗಿರುತ್ತಾರೆ. ಅನೇಕರು 30×40 ಜಾಗದಲ್ಲಿ ಮನೆ ಕಟ್ಟಿಸಿಕೊಂಡರೂ ಜಾಗ ಸಾಕಾಗಿಲ್ಲ, ಮನೆ ಚಿಕ್ಕದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಆದರೆ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಕೇವಲ ಮೂರು ಅಡಿಗೂ ಕಡಿಮೆ ಅಗಲದ ಜಾಗದಲ್ಲಿ ಎರಡು ಮಹಡಿಯ ಮನೆ ನಿರ್ಮಿಸಿದ್ದು, ಆ ಮನೆಯ ಫೋಟೋಗಳು ಹಾಗೂ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ಈ ಮನೆ ಯಾವ ಸ್ಥಳದಲ್ಲಿದೆ ಎಂಬ ಮಾಹಿತಿ ವೀಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಮೂರು ಅಡಿಗೂ ಕಡಿಮೆ ಜಾಗದಲ್ಲಿ ಮನೆ ನಿರ್ಮಾಣ ಸಾಧ್ಯವೇ ಎಂಬ ಅನುಮಾನದಿಂದ ಕೆಲವರು ಇದನ್ನು ಎಐ ಮೂಲಕ ಸೃಷ್ಟಿಸಿದ ವೀಡಿಯೋ ಎಂದು ಕೂಡ ಹೇಳುತ್ತಿದ್ದಾರೆ.
ವೈರಲ್ ಆಗಿರುವ ವೀಡಿಯೋದಲ್ಲಿ ಕಾಣುವಂತೆ ಈ ಮನೆ ಎರಡು ಅಂತಸ್ತಿನದ್ದಾಗಿದ್ದು, ನೆಲ ಮಹಡಿಯಲ್ಲಿ ಐದು ಶಟರ್‌ಗಳಿರುವ ಅಂಗಡಿಗಳನ್ನು ನಿರ್ಮಿಸಲಾಗಿದೆ.
ಪ್ರತ್ಯೇಕ ಪ್ರತ್ಯೇಕವಾಗಿ ವ್ಯಾಪಾರ ನಡೆಸಲು ಅನುಕೂಲವಾಗುವ ರೀತಿಯಲ್ಲಿ ಈ ಅಂಗಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲಿಂದ ಮೆಟ್ಟಿಲುಗಳ ಮೂಲಕ ಮೇಲ್ಮಹಡಿಗೆ ಹೋಗುವ ವ್ಯವಸ್ಥೆ ಮಾಡಲಾಗಿದ್ದು, ಮೆಟ್ಟಿಲು ಹತ್ತುತ್ತಿದ್ದಂತೆ ಮನೆಯ ಬಾಗಿಲು ಕಾಣಿಸುತ್ತದೆ. ಈ ವಿಶಿಷ್ಟ ವಿನ್ಯಾಸವನ್ನು ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿ ವಿಭಿನ್ನ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಈ ಮನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಕತ್ರಾ ಪ್ರದೇಶದಲ್ಲಿದೆ ಎನ್ನಲಾಗುತ್ತಿದ್ದು, @renuy305 ಎಂಬ ಎಕ್ಸ್ ಖಾತೆಯಿಂದ ಈ ಮನೆಯ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಮೂರು ಅಡಿಗೂ ಕಡಿಮೆ ಅಗಲದ ಜಾಗದಲ್ಲಿ ನಿರ್ಮಿಸಲಾದ ಈ ಸಂಪೂರ್ಣ ಮನೆ ಇದೀಗ ವಿಶಿಷ್ಟ ಮನೆ ಎಂಬ ಹೆಸರಿನಿಂದ ಎಲ್ಲರ ಗಮನ ಸೆಳೆಯುತ್ತಿದೆ. ಜಾಗ ಸಣ್ಣದಾಗಿದ್ದರೂ ಅದನ್ನು ನಿರ್ಮಿಸಿದವರ ದೃಷ್ಟಿಕೋನ, ಪರಿಶ್ರಮ ಮತ್ತು ಧೈರ್ಯ ಈ ಮನೆಯನ್ನು ವಿಶಾಲ ಕನಸಿನ ಸಂಕೇತವಾಗಿಸಿದೆ.
ಕತ್ರಾದ ಐದು ಅಂಗಡಿಗಳಿರುವ ಈ ಕಟ್ಟಡದಲ್ಲಿ ಮೆಟ್ಟಿಲುಗಳ ಬಳಿಯಲ್ಲಿದ್ದ ಉಳಿದ ಸಣ್ಣ ಜಾಗದಲ್ಲೇ ಈ ಮನೆಯನ್ನು ನಿರ್ಮಿಸಲಾಗಿದೆ. ಸಾಮಾನ್ಯ ಜನರು ಮನೆ ಕಟ್ಟುವ ಬಗ್ಗೆ ಯೋಚಿಸಲೂ ಸಾಧ್ಯವಾಗದಂತಹ ಜಾಗದಲ್ಲಿ ದೃಢಸಂಕಲ್ಪ ಮತ್ತು ಆತ್ಮವಿಶ್ವಾಸ ಇದ್ದರೆ ಕನಸಿನ ಮನೆ ಸಾಧ್ಯ ಎಂಬುದನ್ನು ಈ ವ್ಯಕ್ತಿ ಸಾಬೀತುಪಡಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕಟ್ಟಡದಲ್ಲಿರುವ ಅಂಗಡಿಗಳ ಬೆಲೆ ಎಷ್ಟು ಎಂದು ಕೆಲವರು ಪ್ರಶ್ನಿಸಿದ್ದಾರೆ. ಕೆಳಗೆ ಪಾನ್ ಅಂಗಡಿ, ಮೇಲೆ ಮನೆ ಎಂದು ಕೆಲವರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು ಈಗಾಗಲೇ ಒಂದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಚಿಕ್ಕ ಜಾಗದಲ್ಲೂ ದೊಡ್ಡ ಕನಸು ಸಾಧ್ಯ ಎಂಬ ಸಂದೇಶವನ್ನು ಎಲ್ಲೆಡೆ ಹರಡುತ್ತಿದೆ.






