ಮುಂಡಗೋಡ (ಉತ್ತರ ಕನ್ನಡ): ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು ನಿವೃತ್ತ ಶಿಕ್ಷಕನೊಬ್ಬರನ್ನು ಬೆದರಿಸಿ ಸುಮಾರು 1.61 ಕೋಟಿ ರೂ. ಹಣವನ್ನು ಲೂಟಿ ಮಾಡಿದ ಘಟನೆ ಮುಂಡಗೋಡ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ವಂಚಕರು ತಾವು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ನಿಮ್ಮ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ಮಾದಕ ವಸ್ತು ಪ್ರಕರಣ ದಾಖಲಾಗಿದೆ ಎಂದು ಶಿಕ್ಷಕರಿಗೆ ಕರೆ ಮಾಡಿ ಆತಂಕ ಮೂಡಿಸಿದ್ದಾರೆ. ಬಳಿಕ ವಿಡಿಯೊ ಕರೆ ಮೂಲಕ ನಿರಂತರ ನಿಗಾವಹಿಸುವುದಾಗಿ ಹೇಳಿ, ಯಾರೊಂದಿಗೂ ಮಾತನಾಡದಂತೆ ಸೂಚಿಸಿ ಇದನ್ನೇ “ಡಿಜಿಟಲ್ ಅರೆಸ್ಟ್” ಎಂದು ನಂಬಿಸಿದ್ದಾರೆ.
ಕೇಸ್ ನಿವಾರಣೆ ಹಾಗೂ ಬಂಧನ ತಪ್ಪಿಸಿಕೊಳ್ಳಲು ಹಣ ಪಾವತಿಸಬೇಕೆಂದು ಹೇಳಿದ ವಂಚಕರು, ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಶಿಕ್ಷಕರನ್ನು ಒತ್ತಾಯಿಸಿದ್ದಾರೆ. ಹಲವು ದಿನಗಳ ಕಾಲ ನಡೆದ ಈ ಪ್ರಕ್ರಿಯೆಯಲ್ಲಿ ಒಟ್ಟು 1.61 ಕೋಟಿ ರೂ. ಹಣ ವಂಚಕರ ಕೈ ಸೇರಿದೆ.
ನಂತರ ಅನುಮಾನಗೊಂಡ ಶಿಕ್ಷಕ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಬರ್ ಅಪರಾಧ ವಿಭಾಗದ ಸಹಕಾರದೊಂದಿಗೆ ತನಿಖೆ ಆರಂಭಿಸಿದ್ದು, ಹಣ ವರ್ಗಾವಣೆಯಾದ ಖಾತೆಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಪೊಲೀಸರ ಎಚ್ಚರಿಕೆ:
ಅಧಿಕಾರಿಗಳು ಎಂದು ಹೇಳಿಕೊಂಡು ಕರೆ ಮಾಡಿ ಹಣ ಕೇಳುವವರನ್ನು ನಂಬಬಾರದು. “ಡಿಜಿಟಲ್ ಅರೆಸ್ಟ್” ಎಂಬ ಪದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಇಂತಹ ಕರೆಗಳು ಬಂದರೆ ತಕ್ಷಣ 1930 ಸಹಾಯವಾಣಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.






