ಹೈದರಾಬಾದ್: ಕೌಟುಂಬಿಕ ಕಲಹದಿಂದ ಮನನೊಂದ 27 ವರ್ಷದ ಮಹಿಳೆಯೊಬ್ಬಳು ತನ್ನ 10 ತಿಂಗಳ ಮಗುವಿಗೆ ವಿಷವುಣಿಸಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ದುರ್ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ತಾಯಿ ಮತ್ತು ಮಗು ಸಾವನ್ನಪ್ಪಿರುವುದನ್ನು ಕಂಡ ಮಗುವಿನ ಅಜ್ಜಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇದನ್ನು ಓದಿ: 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಪರಾರಿಯಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ಬುರ್ಕಾ ವೇಷದಲ್ಲಿ ಅರೆಸ್ಟ್
ಮೃತ ಮಹಿಳೆಯನ್ನು ಸುಷ್ಮಾ (27) ಎಂದು ಗುರುತಿಸಲಾಗಿದ್ದು, ಅವರು ನಾಲ್ಕು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಯಶವಂತ್ ರೆಡ್ಡಿ ಅವರನ್ನು ವಿವಾಹವಾಗಿದ್ದರು. ಇತ್ತೀಚಿನ ದಿನಗಳಲ್ಲಿ ದಂಪತಿ ನಡುವೆ ನಿರಂತರವಾಗಿ ಗೃಹ ಕಲಹ ನಡೆಯುತ್ತಿತ್ತು ಎಂದು ಕುಟುಂಬದ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ದಿನ ಸುಷ್ಮಾ, ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶಾಪಿಂಗ್ ಮಾಡಲು ಹೋಗುತ್ತಿರುವುದಾಗಿ ಹೇಳಿ ತಮ್ಮ ತಾಯಿ ಲಲಿತಾ (44) ಅವರ ಮನೆಗೆ ತೆರಳಿದ್ದರು. ಅಲ್ಲಿ ಮಗುವಿನೊಂದಿಗೆ ಮತ್ತೊಂದು ಕೋಣೆಗೆ ತೆರಳಿದ ಅವರು, ಮಗುವಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೆಲಸ ಮುಗಿಸಿ ಮನೆಗೆ ಮರಳಿದ ಪತಿ ಯಶವಂತ್ ರೆಡ್ಡಿ, ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿ ಬಾಗಿಲು ಒಡೆದಿದ್ದಾರೆ. ಒಳಗೆ ಪ್ರವೇಶಿಸಿದಾಗ ಸುಷ್ಮಾ ಮತ್ತು ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ, ವೈದ್ಯರು ತಾಯಿ ಮತ್ತು ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ದುರ್ಘಟನೆಯ ಸುದ್ದಿ ತಿಳಿದು ತೀವ್ರ ಆಘಾತಕ್ಕೆ ಒಳಗಾದ ಲಲಿತಾ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






