ಪತ್ನಿಯ ನಡವಳಿಕೆ ಕುರಿತು ಪತಿಯು ನಿರಂತರವಾಗಿ ಅನುಮಾನ ವ್ಯಕ್ತಪಡಿಸಿ ಗಲಾಟೆ ನಡೆಸುತ್ತಿದ್ದ ಪರಿಣಾಮ, ಮನಸ್ಸಿಗೆ ತೀವ್ರ ನೋವುಂಟಾದ ತಾಯಿಯೊಬ್ಬಳು ತನ್ನ ಆರು ವರ್ಷದ ಮಗಳಿಗೆ ನೇಣು ಹಾಕಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇದನ್ನು ಓದಿ:ಬೀದಿನಾಯಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯಕ್ಕೆ ರಮ್ಯಾ ತೀವ್ರ ಟೀಕೆ
ಈ ಹೃದಯವಿದ್ರಾವಕ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ನೇಪಾಳ ಮೂಲದ ನಿರುತಾ (30) ಮತ್ತು ಕಿಶನ್ ದಂಪತಿ ಸಿಲಿಕಾನ್ ಸಿಟಿಯಲ್ಲಿ ವಾಸವಾಗಿದ್ದು, ಜನವರಿ 5ರ ರಾತ್ರಿ 10:45ರಿಂದ 11 ಗಂಟೆಯ ನಡುವೆ ಈ ದುರ್ಘಟನೆ ನಡೆದಿರುವುದು ತಿಳಿದುಬಂದಿದೆ.
ಕಿಶನ್ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ನಿರುತಾ ಹೆಚ್ಚು ಸಮಯ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಳೆ ಎಂಬ ಕಾರಣಕ್ಕೆ, ಆಕೆಯ ನಡತೆಯ ಬಗ್ಗೆ ಪತಿ ಸಂಶಯ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ದಂಪತಿಗಳ ನಡುವೆ ಆಗಾಗ್ಗೆ ಮಾತಿನ ಚಕಮಕಿ ಮತ್ತು ಗಲಾಟೆಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ.
ಘಟನೆಯ ದಿನ ಬೆಳಿಗ್ಗೆ ಕಿಶನ್ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ರಾತ್ರಿ ಕೆಲಸ ಮುಗಿಸಿ ಮನೆಗೆ ಮರಳಿದಾಗ ಅಲ್ಲಿ ಆತನನ್ನು ಭಾರೀ ಆಘಾತ ಕಾದಿತ್ತು. ಪತ್ನಿ ಮತ್ತು ಮಗಳು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಇಬ್ಬರನ್ನೂ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಲಾಯಿತು.
ಆದರೆ ಅಷ್ಟರಲ್ಲೇ ಮಗು ಪ್ರಾಣ ಕಳೆದುಕೊಂಡಿದೆ.
ಈ ದುರ್ಘಟನೆಯಲ್ಲಿ ಆರು ವರ್ಷದ ಬಾಲಕಿ ಕೃತಿಕಾ ಮೃತಪಟ್ಟಿದ್ದು, ತಾಯಿ ನಿರುತಾ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರುತಾರನ್ನು ಖಾಸಗಿ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಇರಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಮಾಹಿತಿ ಪಡೆದ ಹೆಣ್ಣೂರು ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿಯ ಅನುಮಾನ ಮತ್ತು ದಾಂಪತ್ಯ ಕಲಹವೇ ಈ ದಾರುಣ ಘಟನೆಗೆ ಕಾರಣವಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಿಶನ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.






