ವಿಧವೆ ತಾಯಿಯಾಗಿ ಅಥವಾ ಒಂಟಿಯಾಗಿ ಮಹಿಳೆಯೊಬ್ಬಳು ಮಕ್ಕಳನ್ನು, ಅದರಲ್ಲೂ ಹೆಣ್ಣು ಮಗುವನ್ನು ಬೆಳೆಸುವುದು ಅತಿ ಕಷ್ಟದ ಕೆಲಸ. ಗಂಡನಿಲ್ಲ ಎಂಬ ಕೊರಗು ಒಂದೆಡೆ ಕಾಡಿದರೆ, ಸಮಾಜದ ಕೆಟ್ಟ ದೃಷ್ಟಿ ಮತ್ತೊಂದೆಡೆ ಹಿಂಬಾಲಿಸುತ್ತದೆ. ಒಂಟಿ ಮಹಿಳೆ ಎಂದು ತಿಳಿದ ಕೂಡಲೇ ಸಹಾಯದ ನೆಪದಲ್ಲಿ ಹತ್ತಿರ ಬರಲು ಪ್ರಯತ್ನಿಸುವವರು ಅನೇಕರು.
ಇಂತಹ ಪರಿಸ್ಥಿತಿಯಲ್ಲಿ ಹೆಣ್ಣೊಬ್ಬಳು ತನ್ನ ಹೆಣ್ಣು ಮಗುವನ್ನು ರಕ್ಷಿಸಿ ಬೆಳೆಸುವುದು ದೊಡ್ಡ ಸವಾಲು. ಆದರೆ ಈ ಕಠಿಣ ಸಮಾಜದ ಮಧ್ಯೆಯೇ ಗಂಡನ ಸಾವಿನ ಬಳಿಕ ಗಂಡಿನಂತೆ ಬದುಕಿ ಮಗಳನ್ನು ಸಾಕಿದ ಧೈರ್ಯಶಾಲಿ ಮಹಿಳೆಯೊಬ್ಬಳ ಕಥೆ ಎಲ್ಲರಿಗೂ ಪ್ರೇರಣೆಯಾಗಿದೆ.
ಈ ಮಹಿಳೆಯ ಹೆಸರು ಪೆಚ್ಚಿಯಮ್ಮಾಳ್. ತಮಿಳುನಾಡಿನ ತೂತುಕುಡಿ ಜಿಲ್ಲೆಯ ನಿವಾಸಿಯಾದ ಅವರು ಎಳೆಯ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡರು. ಆ ದಾಂಪತ್ಯದಲ್ಲಿ ಅವರಿಗೆ ಒಬ್ಬಳು ಹೆಣ್ಣು ಮಗಳು ಹುಟ್ಟಿದ್ದಳು. ಸಮಾಜದ ನಿಷ್ಠುರ ನೋಟಗಳ ಅರಿವಿದ್ದ ಪೆಚ್ಚಿಯಮ್ಮಾಳ್, ಮಗಳ ಭದ್ರತೆಯೇ ಮೊದಲ ಆದ್ಯತೆ ಎಂದು ನಿರ್ಧರಿಸಿ, ಗಂಡನ ಸಾವಿನ ನಂತರ ಪುರುಷನ ವೇಷದಲ್ಲಿ ಬದುಕುವ ಕಠಿಣ ನಿರ್ಧಾರ ಕೈಗೊಂಡರು.
ಗಂಡನ ಅಗಲಿಕೆಯ ಬಳಿಕ ಒಂಟಿಯಾಗಿದ್ದ ಪೆಚ್ಚಿಯಮ್ಮಾಳ್, ಪುಟ್ಟ ಮಗಳನ್ನು ಸಾಕುವ ಜವಾಬ್ದಾರಿಯೊಂದಿಗೆ ಕೆಲಸ ಮಾಡಲು ಆರಂಭಿಸಿದರು. ಆದರೆ ಹೊರಗೆ ದುಡಿಯುವಾಗ ಎದುರಾದ ಸಾಮಾಜಿಕ ಅಭದ್ರತೆ, ನಿರಂತರ ಕಿರುಕುಳ ಮತ್ತು ಅಸುರಕ್ಷಿತ ವಾತಾವರಣ ಅವರನ್ನು ಕಾಡಿತು. ಹೀಗಾಗಿ ತನ್ನ ಹಾಗೂ ಮಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಪುರುಷ ಪ್ರಧಾನ ಸಮಾಜದಲ್ಲಿ ಪುರುಷನಂತೆ ಬದುಕುವುದೇ ಸುರಕ್ಷಿತವೆಂದು ಅವರು ತೀರ್ಮಾನಿಸಿದರು. ಈ ನಿರ್ಧಾರದೊಂದಿಗೆ ತಮ್ಮ ಹೆಸರನ್ನು ‘ಮುತ್ತು’ ಎಂದು ಬದಲಿಸಿಕೊಂಡರು.
ಮುತ್ತು ಮಾಸ್ಟರ್ ಎಂಬ ಹೆಸರಿನಲ್ಲಿ ಅವರು ಸೀರೆ–ರವಿಕೆಯನ್ನು ಬಿಟ್ಟು, ಲುಂಗಿ ಅಥವಾ ಪಂಚೆ ಮೇಲೆ ಶರ್ಟ್ ಧರಿಸಿ ಪುರುಷನಂತೆ ಕಾಣಿಸಿಕೊಳ್ಳಲು ಆರಂಭಿಸಿದರು. ಕಟ್ಟಡಗಳಿಗೆ ಬಣ್ಣ ಹಚ್ಚುವುದು, ಚಹಾ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುವುದು ಸೇರಿದಂತೆ ಸಾಮಾನ್ಯವಾಗಿ ಗಂಡಸರು ಮಾಡುವ ಕೆಲಸಗಳನ್ನೇ ಅವರು ಮಾಡಿದರು. ಈ ವೇಷ ಅವರಿಗೆ ಭದ್ರತೆಯ ಜೊತೆಗೆ ಸಮಾಜದಲ್ಲಿ ಗೌರವವನ್ನೂ ತಂದುಕೊಟ್ಟಿತು. ಅವರ ಬದುಕು ಎಷ್ಟರಮಟ್ಟಿಗೆ ಬದಲಾಗಿತ್ತೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಪುರುಷರ ಶೌಚಾಲಯವನ್ನೇ ಬಳಸುವ ಸ್ಥಿತಿಗೆ ಅವರು ಬಂದಿದ್ದರು.
ಮುತ್ತು ಮಾಸ್ಟರ್ ಆಗಿ ಹಲವು ವರ್ಷಗಳ ಕಾಲ ವಿವಿಧ ಕೆಲಸಗಳನ್ನು ಮಾಡಿ ಅವರು ಉತ್ತಮ ಆದಾಯ ಗಳಿಸಿದರು. ಈ ಜೀವನಶೈಲಿ ಅವರ ಹೆಣ್ಣು ಮಗುವನ್ನು ಸಮಾಜದ ಕೆಟ್ಟ ದೃಷ್ಟಿ ಹಾಗೂ ಶೋಷಣೆಯಿಂದ ದೂರವಿಟ್ಟಿತು. ಕುಟುಂಬದ ಕೆಲವರು ಮತ್ತು ಮಗಳನ್ನು ಹೊರತುಪಡಿಸಿ, ಉಳಿದ ಯಾರಿಗೂ ಅವರು ಮಹಿಳೆ ಎಂಬ ಸತ್ಯ ತಿಳಿದಿರಲಿಲ್ಲ. ಊರಿನ ಜನರೂ ಯಾವುದೇ ಅನುಮಾನವಿಲ್ಲದೆ ಅವರನ್ನು ಒಬ್ಬ ಪುರುಷನಂತೆ ಸ್ವೀಕರಿಸಿದ್ದರು.
ಮಗಳ ಮದುವೆಯಾದ ನಂತರವೂ ಪೆಚ್ಚಿಯಮ್ಮಾಳ್ ಮುತ್ತುವಿನ ವೇಷದಲ್ಲೇ ಬದುಕನ್ನು ಮುಂದುವರೆಸಿದರು. ವರ್ಷಗಳ ಕಾಲ ಅವರು ಆಯ್ದ ಈ ದಾರಿ ಅವರಿಗೆ ಭದ್ರತೆ, ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ನೀಡಿತು. ತಾಯಿಯಾಗಿ ಹಾಗೂ ತಂದೆಯಾಗಿ ಒಂದೇ ಸಮಯದಲ್ಲಿ ನಿಂತು ಮಗಳನ್ನು ಬೆಳೆಸಿದ ಪೆಚ್ಚಿಯಮ್ಮಾಳ್ ಅವರ ಬದುಕಿನ ಕಥೆ ಇಂದು ಸಮಾಜದಲ್ಲಿನ ಅನೇಕ ಮಹಿಳೆಯರಿಗೆ ದಾರಿ ತೋರಿಸುವ ಬೆಳಕಾಗಿದೆ.






