ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಬೆಳೆ ಸಂಪೂರ್ಣವಾಗಿ ಸುಟ್ಟು ನಾಶವಾಗಿದೆ.
ಗಣೇಶ ಹಾಗೂ ಗೋಪಿ ಚವ್ಹಾಣ ಸಹೋದರರು ಸುಮಾರು 100 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳಕ್ಕೆ ದುಷ್ಕರ್ಮಿಗಳು ಡೀಸೆಲ್ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಈ ಕೃತ್ಯದಲ್ಲಿ ನಾಲ್ಕು ಮಂದಿ ಭಾಗಿಯಾಗಿರಬಹುದು ಎಂದು ಹೇಳಲಾಗಿದೆ.
ಇದನ್ನು ಓದಿ: ರಿಪಬ್ಲಿಕ್ ಡೇ ಪ್ರಯುಕ್ತ IRCTC ಡುಬೈ ಟೂರ್ ಪ್ಯಾಕೇಜ್ ಘೋಷಣೆ
ಸುಟ್ಟು ಹೊತ್ತಿಕೊಂಡ ಮೆಕ್ಕೆಜೋಳವನ್ನು ಕಂಡು ತೀವ್ರ ಮನಸ್ತಾಪಗೊಂಡ ರೈತ ಕುಟುಂಬ ಮಕ್ಕಳು ಸೇರಿದಂತೆ ಬೆಂಕಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದೆ. ಆದರೆ ಸ್ಥಳದಲ್ಲೇ ಇದ್ದ ಗ್ರಾಮಸ್ಥರು ಸಮಯಕ್ಕೆ ಸರಿಯಾಗಿ ಧಾವಿಸಿ ರೈತ ಕುಟುಂಬವನ್ನು ರಕ್ಷಿಸಿದ್ದಾರೆ. ಕಣ್ಣೆದುರು ಬೆಳೆ ಸುಟ್ಟು ಭಸ್ಮವಾಗುತ್ತಿರುವುದನ್ನು ನೋಡಿ ರೈತ ಕಣ್ಣೀರು ಹಾಕಿದ ದೃಶ್ಯ ಎಲ್ಲರನ್ನೂ ಕಲುಷಿತಗೊಳಿಸಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.






