ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಹಾಗೂ ಮಂಡ್ಯ ಆರ್ಎಸ್ಎಸ್ ಮುಖಂಡ ಮಾರ್ಕಂಡೇಯ ಅವರದ್ದೆನ್ನಲ್ಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದಿಚುಂಚನಗಿರಿ ಮಠಾಧಿಪತಿಗಳಾದ ನಿರ್ಮಲಾನಂದ ಸ್ವಾಮೀಜಿ ಬಗ್ಗೆ ಅವಹೇಳನಕಾರಿ ಪದ ಬಳಸಿ ಅಶ್ಲೀಲವಾಗಿ ಬೈದಿರುವುದು ಅಡಿಯೋದಲ್ಲಿ ಕಂಡು ಬಂದಿದೆ.
ಅಲ್ಲದೇ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಚೆಲುವರಾಯ ಸ್ವಾಮಿ ಬಗ್ಗೆಯೂ ಈತ ಕಾರ್ಯಕ್ರಮದಲ್ಲಿ ಅಶ್ಲೀಲವಾಗಿ ಮಾತಾನಾಡಿದ್ದು, ಇವರಿಬ್ಬರೂ ಯಾರಿಗೆ ಹುಟ್ಟಿದ್ದು ಎಂದೆಲ್ಲಾ ಅಸಭ್ಯ ವರ್ತನೆ ತೋರಿದ್ದಾನೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದ ಬಗ್ಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇಷ್ಟೆಲ್ಲಾ ನಡೆದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವುದು ಮಂಡ್ಯ ಪೊಲೀಸ್ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಇದುವರೆಗೂ ಈತನ ವಿರುದ್ದ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಕಳೆದ ವರ್ಷ ಪಾಂಡವಪುರ ಗಣೇಶೋತ್ಸವ ಗಲಭೆ ಹಾಗೂ ಇತ್ತೀಚಿಗಷ್ಟೇ ನಡೆದಿದ್ದ ಮದ್ದುರು ಕಲ್ಲು ತೂರಾಟ ಘಟನೆಯನ್ನುದ್ದೇಶಿಸಿ ಮಾತನಾಡುವಾಗ ಈತ ಪ್ರಚೋದನಕಾರಿ ಹೇಳಿಕೆ ನೀಡಿದ್ದಾನೆನ್ನಲಾಗಿದೆ.
ಈತನ ದನಿಯಿರುವ ಅವಹೇಳನಕಾರಿ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಹಿಂದೂ ಜಾಗರಣ ವೇದಿಕೆಯ ಘಟನೆಯಿಂದ ಅಂತರ ಕಾಯ್ದುಕೊಂಡಿದೆ. ಜಿಲ್ಲಾ ಸಂಯೋಜಕರ ಹೆಸರಿನಲ್ಲಿ ಆಡಿಯೋ ಹರಿದಾಡುತ್ತಿರುವ ಕಾರಣ ಮಂಡ್ಯ ಜಿಲ್ಲಾ ಸಮಿತಿಯನ್ನು ವಿಸರ್ಜಿಸಲಾಗುವುದು. ಶೀಘ್ರದಲ್ಲೇ ಹೊಸ ಸಮಿತಿಯನ್ನು ರಚಿಸಲಾಗುವುದು ಎಂದು ಪ್ರಾಂತ ಸಂಯೋಜಕ ದೋ. ಕೇಶವಮೂರ್ತಿ ಘೋಷಿಸಿದ್ಧಾರೆ.
ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾ ಖಾನ್ ಎಂದು ಸಂಬೋಧಿಸಿರುವುದಲ್ಲದೇ, ಜಿಲ್ಲಾ ಎಸ್ಪಿ ಬಗ್ಗೆಯೂ ಏಕವಚನದಲ್ಲಿ ಹರಿಹಾಯ್ದಿರುವ ಮಾರ್ಕಂಡೇಯ ಬೆರಕೆ ನನ್ನ ಮಕ್ಕಳೆಲ್ಲಾ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಮದ್ದೂರಿನಲ್ಲಿ ಬಿದ್ದಿರುವುದು ಎರಡೇ ಕಲ್ಲು ಎಂದಾದರೆ 21 ಜನರನ್ನು ಯಾಕೆ ಅರೆಸ್ಟ್ ಮಾಡಿಸಿದ್ದೀಯಾ ಎಂದು ಗೃಹಸಚಿವ ಜಿ. ಪರಮೇಶ್ವರ್ ವಿರುದ್ದವೂ ಏಕವಚನದಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವುದು ಕಂಡು ಬಂದಿದೆ. ಮಾರ್ಕಂಡೇಯ ವಿರುದ್ದ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದೆ.






