ಬೆಂಗಳೂರು, ಡಿಸೆಂಬರ್ 24: ಮಗಳನ್ನ ಮದುವೆ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ತಾಯಿಯ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಸವೇಶ್ವರನಗರದ ಸಾಣೆಗುರುವನಹಳ್ಳಿಯಲ್ಲಿ ಗೀತಾ ಎಂಬ ಮಹಿಳೆ ತನ್ನ ಮಗಳೊಂದಿಗೆ ವಾಸವಿದ್ದರು. ಗೀತಾ ಪ್ರಾವಿಶನ್ ಸ್ಟೋರ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಇದೇ ಬಿಲ್ಡಿಂಗ್ನಲ್ಲಿ ಟೀ-ಸ್ಟಾಲ್ ನಡೆಸುತ್ತಿದ್ದ ಮುತ್ತು ಎಂಬ ವ್ಯಕ್ತಿಯ ಪರಿಚಯ ಗೀತಾಗೆ ಇದ್ದು, ಮುತ್ತು ಗೀತಾರ ಮಗಳೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ ಎನ್ನಲಾಗಿದೆ. ಗೀತಾರ ಮಗಳಿಗೆ ಕೇವಲ 19 ವರ್ಷ ವಯಸ್ಸಾಗಿದ್ದು, ಆಕೆಯನ್ನು ತನ್ನಿಗೆ ಮದುವೆ ಮಾಡಿಕೊಡಬೇಕೆಂದು ಮುತ್ತು ಗೀತಾಳ ಮೇಲೆ ಒತ್ತಾಯ ಮಾಡುತ್ತಿದ್ದನು. ಆದರೆ ಗೀತಾ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ್ದರು.
ಈ ನಿರಾಕರಣೆಯ ಸಿಟ್ಟಿನಿಂದ ಮುತ್ತು ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಗೀತಾಳ ಮನೆಗೆ ನುಗ್ಗಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದನು ಎನ್ನಲಾಗಿದೆ. ಈ ಘಟನೆಯಲ್ಲಿ ಗೀತಾ ಶೇಕಡಾ 50 ರಷ್ಟು ಸುಟ್ಟು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಮುತ್ತು ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.






