ರಾಯ್ಪುರ, ಡಿಸೆಂಬರ್ 20: ನಗರದಲ್ಲಿ ಹೆಚ್ಚುತ್ತಿರುವ ಸೊಳ್ಳೆ ಕಾಟದಿಂದ ಬೇಸತ್ತ ವ್ಯಕ್ತಿಯೊಬ್ಬರು, ಸತ್ತ ಸೊಳ್ಳೆಗಳನ್ನು ಸಂಗ್ರಹಿಸಿ ನೇರವಾಗಿ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಗೆ ತೆರಳಿದ ಅಪರೂಪದ ಘಟನೆ ಛತ್ತೀಸ್ಗಢದ ರಾಯ್ಪುರದಲ್ಲಿ ನಡೆದಿದೆ.
ವಾಮನ್ರಾವ್ ಲಾಖೆ ವಾರ್ಡ್ನ ನಿವಾಸಿ ದೌಲಾಲ್ ಪಟೇಲ್ ಅವರಿಗೆ ಸೊಳ್ಳೆಗಳ ಕಾಟ ತೀವ್ರವಾಗಿದ್ದು, ಡೆಂಗ್ಯೂ ಸೋಂಕಿನ ಭೀತಿಯಲ್ಲಿದ್ದರು. ಆತಂಕಗೊಂಡ ಅವರು ಮೊದಲು ವೈದ್ಯರನ್ನು ಸಂಪರ್ಕಿಸಿದ್ದು, ಸೊಳ್ಳೆಗಳನ್ನು ಪರೀಕ್ಷೆಗೆ ಒಳಪಡಿಸಲು ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸೂಚನೆಯಂತೆ, ಸಾಮಾಜಿಕ ಕಾರ್ಯಕರ್ತ ವಿಜಯ್ ಸೋನಾ ಹಾಗೂ ಪುರಸಭೆಯ ವಿರೋಧ ಪಕ್ಷದ ನಾಯಕ ಆಕಾಶ್ ತಿವಾರಿ ಅವರೊಂದಿಗೆ ಪಟೇಲ್, ಪಾಲಿಥಿನ್ ಚೀಲದಲ್ಲಿ ಸತ್ತ ಸೊಳ್ಳೆಗಳನ್ನು ನಗರ ಪಾಲಿಕೆ ಪ್ರಧಾನ ಕಚೇರಿಯ ಆರೋಗ್ಯಾಧಿಕಾರಿಗೆ ಹಸ್ತಾಂತರಿಸಿದರು.
ಪಾಲಿಕೆ ಅಧಿಕಾರಿಗಳು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ನಡೆಸಿದ್ದು, ಸೊಳ್ಳೆಗಳು ಡೆಂಗ್ಯೂ ವಾಹಕಗಳಲ್ಲದೆ ಸಾಮಾನ್ಯ ಸೊಳ್ಳೆಗಳೆಂದು ವರದಿ ದೃಢಪಡಿಸಿದೆ. ಇದರಿಂದ ತಾತ್ಕಾಲಿಕ ಸಮಾಧಾನ ದೊರಕಿದರೂ, ಘಟನೆಯು ನಗರದ ಸೊಳ್ಳೆ ನಿಯಂತ್ರಣ ವ್ಯವಸ್ಥೆಯ ದುಸ್ಥಿತಿಯನ್ನು ಬಯಲಿಗೆ ತಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಆಕಾಶ್ ತಿವಾರಿ, ‘ಒಂದೆಡೆ “ಸ್ವಚ್ಛ ರಾಯ್ಪುರ, ಸುಂದರ ರಾಯ್ಪುರ” ಎಂಬ ಘೋಷಣೆಗಳು, ಮತ್ತೊಂದೆಡೆ ನಾಗರಿಕರು ಸೊಳ್ಳೆಗಳನ್ನು ಹಿಡಿದು ಪಾಲಿಕೆ ಕಚೇರಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಟೀಕಿಸಿದರು. ಸೊಳ್ಳೆಗಳ ಕಾಟ ಆತಂಕಕಾರಿ ಮಟ್ಟ ತಲುಪಿದ್ದು, ಜನರು ಡೆಂಗ್ಯೂ ಮತ್ತು ಮಲೇರಿಯಾ ಭೀತಿಯಲ್ಲಿ ಬದುಕುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅದೇ ಪ್ರದೇಶದಲ್ಲಿ ಕೆಲ ವರ್ಷಗಳ ಹಿಂದೆ ಸೊಳ್ಳೆಯಿಂದ ಹರಡುವ ಕಾಯಿಲೆಯಿಂದ ಯುವಕನೊಬ್ಬ ಮೃತಪಟ್ಟ ಘಟನೆ ನೆನಪಿಸಿಕೊಂಡ ಸ್ಥಳೀಯರು, ರಾಜಧಾನಿಯೇ ಈ ಸ್ಥಿತಿಯಲ್ಲಿದ್ದರೆ ಸಣ್ಣ ಪಟ್ಟಣಗಳ ಪರಿಸ್ಥಿತಿ ಹೇಗಿರಬಹುದು ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ ರಾಯ್ಪುರ ಮುನ್ಸಿಪಲ್ ಕಾರ್ಪೊರೇಷನ್, ಪೀಡಿತ ಪ್ರದೇಶಗಳಲ್ಲಿ ಫಾಗಿಂಗ್ ಹಾಗೂ ಲಾರ್ವಾ ವಿರೋಧಿ ಸಿಂಪಡಣೆಯನ್ನು ತೀವ್ರಗೊಳಿಸಲಾಗುವುದು ಎಂದು ಪ್ರಕಟಿಸಿದೆ. ಆದರೆ ಸೊಳ್ಳೆ ನಿಯಂತ್ರಣಕ್ಕೆ ಪ್ರತಿವರ್ಷ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೂ, ತೆರೆದ ಚರಂಡಿಗಳು ಮತ್ತು ಕಳಪೆ ಒಳಚರಂಡಿ ವ್ಯವಸ್ಥೆಯೇ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತಿದೆ ಎಂದು ನಿವಾಸಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.






