ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಶುಕ್ರವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶ್ರೀ ರೇಣುಕಾಜಿ ಕ್ಷೇತ್ರದ ಹರಿಪುರ್ಧರ್ ಸಮೀಪ ಖಾಸಗಿ ಬಸ್ ಒಂದು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ. ಈ ದುರ್ಘಟನೆಯಲ್ಲಿ ಇದುವರೆಗೆ 12 ಮಂದಿ ಸಾವನ್ನಪ್ಪಿದ್ದು, 33 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನು ಓದಿ: ತುಮಕೂರಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಅಯ್ಯಪ್ಪಸ್ವಾಮಿ ಭಕ್ತರು ಮೃತ್ಯು
ಮೃತರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ.
ಶಿಮ್ಲಾದಿಂದ ಕುಪ್ವಿ ಕಡೆಗೆ ತೆರಳುತ್ತಿದ್ದ ಖಾಸಗಿ ಜೀಟ್ ಕೋಚ್ ಬಸ್, ಹರಿಪುರ್ಧರ್ಗೆ ಕೇವಲ 100 ಮೀಟರ್ ದೂರದಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸುಮಾರು 100 ಮೀಟರ್ ಆಳದ ಕಂದಕಕ್ಕೆ ಉರುಳಿದೆ. ಅಪಘಾತದ ವೇಳೆಯಲ್ಲಿ ಬಸ್ನಲ್ಲಿ ಒಟ್ಟು 45 ಮಂದಿ ಪ್ರಯಾಣಿಸುತ್ತಿದ್ದರು.
ಅಪಘಾತದಲ್ಲಿ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 33 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಶಿಮ್ಲಾದ ಐಜಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸಂಗ್ರಾ, ರಾಜ್ಗಢ ಮತ್ತು ದಾದಾಹು ಪ್ರದೇಶಗಳಿಂದ ಪೊಲೀಸರು ಹಾಗೂ ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ಯುದ್ಧೋಪಾದಿಯಲ್ಲಿ ನಡೆಸಲಾಗುತ್ತಿದೆ ಎಂದು ಸಿರ್ಮೌರ್ ಎಸ್ಪಿ ಎನ್.ಎಸ್. ನೇಗಿ ತಿಳಿಸಿದ್ದಾರೆ.
ಸಿರ್ಮೌರ್ ಜಿಲ್ಲೆಯ ಹರಿಪುರ್ಧರ್ ಬಳಿ ನಡೆದ ಬಸ್ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ತೀವ್ರ ಸಂತಾಪ ಸೂಚಿಸಿದ್ದಾರೆ. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಮೃತರ ಕುಟುಂಬಗಳಿಗೆ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ ಮುಖ್ಯಮಂತ್ರಿ, ಮೃತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ಕ್ರಮ ಕೈಗೊಳ್ಳುವಂತೆ ಕೂಡ ನಿರ್ದೇಶನ ನೀಡಿದ್ದಾರೆ.






