---Advertisement---

ಸಾಲದ ಒತ್ತಡಕ್ಕೆ ಕಿಡ್ನಿಯನ್ನೇ ಮಾರಿದ ರೈತ: ಅಕ್ರಮ ಬಡ್ಡಿ ದಂಧೆ 

On: December 17, 2025 10:57 AM
Follow Us:
---Advertisement---

ಪುಣೆ, ಡಿಸೆಂಬರ್ 17:ಸಾಲ ತೀರಿಸಲಾಗದೆ ರೈತರೊಬ್ಬರು ತಮ್ಮ ಒಂದು ಕಿಡ್ನಿಯನ್ನೇ ಮಾರಿರುವ ಮನಕಲುಕುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೇವಲ 1 ಲಕ್ಷ ರೂ. ಸಾಲಕ್ಕೆ ಶೇ.40ರಷ್ಟು ಅಕ್ರಮ ಬಡ್ಡಿ ವಿಧಿಸಲಾಗಿದ್ದು, ವರ್ಷಗಳ ಅವಧಿಯಲ್ಲಿ ಈ ಸಾಲ 74 ಲಕ್ಷ ರೂ.ಗೆ ಏರಿದ್ದರಿಂದ, ಬೇರೆ ದಾರಿ ಕಾಣದೆ ರೈತ ಅತಿದುರಂತ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ರೋಷನ್ ಸದಾಶಿವ್ ಕುಡೆ ಎಂಬ ರೈತ ನಾಲ್ಕು ಎಕರೆ ತೋಟ ಹೊಂದಿದ್ದು, ಕೃಷಿಯಿಂದ ನಿರೀಕ್ಷಿತ ಆದಾಯ ಲಭ್ಯವಾಗಿರಲಿಲ್ಲ. ನಂತರ ಡೈರಿ ವ್ಯವಹಾರ ಆರಂಭಿಸುವ ಉದ್ದೇಶದಿಂದ 2021ರಲ್ಲಿ ನಾಲ್ವರು ಸ್ಥಳೀಯ ಬಡ್ಡಿದಾರರಿಂದ 1 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಖರೀದಿಸಿದ್ದ ಹಸುಗಳು ಸತ್ತ ಪರಿಣಾಮ ಆದಾಯ ಕುಸಿತಗೊಂಡು ಸಾಲ ಮರುಪಾವತಿ ಅಸಾಧ್ಯವಾಗಿದೆ.

ಸಾಲ ತೀರಿಸಲಾಗದ ಕಾರಣ ಬಡ್ಡಿದಾರರು ನಿರಂತರವಾಗಿ ಮನೆಗೆ ಬಂದು ಒತ್ತಡ ಹಾಕುತ್ತಿದ್ದರೆಂದು ಹೇಳಲಾಗಿದೆ. 1 ಲಕ್ಷ ರೂ. ಇದ್ದ ಸಾಲ ಹಂತ ಹಂತವಾಗಿ 74 ಲಕ್ಷ ರೂ.ಗೆ ಏರಿತು. ಸಾಲ ತೀರಿಸಲು ಕುಡೆ ತಮ್ಮ ಭೂಮಿಯ ಒಂದು ಭಾಗ, ಟ್ರ್ಯಾಕ್ಟರ್ ಹಾಗೂ ಮನೆಯ ವಸ್ತುಗಳನ್ನು ಮಾರಿದರೂ ಪ್ರಯೋಜನವಾಗಲಿಲ್ಲ.

ಇದಾದ ಬಳಿಕ ಬಡ್ಡಿದಾರರಲ್ಲಿ ಒಬ್ಬರು ಕಿಡ್ನಿಯನ್ನು ಮಾರಾಟ ಮಾಡುವಂತೆ ಒತ್ತಾಯಿಸಿದರೆಂದು ಆರೋಪಿಸಲಾಗಿದೆ. ಏಜೆಂಟ್‌ಗಳ ಮೂಲಕ ರೈತೆಯನ್ನು ವೈದ್ಯಕೀಯ ಪರೀಕ್ಷೆಗೆ ಕೋಲ್ಕತ್ತಾಗೆ ಕರೆದೊಯ್ಯಲಾಗಿದ್ದು, ನಂತರ ಕಾಂಬೋಡಿಯಾದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಒಂದು ಕಿಡ್ನಿಯನ್ನು ತೆಗೆದುಹಾಕಲಾಗಿದೆ. ಇದಕ್ಕೆ ಬದಲಾಗಿ ಅವರಿಗೆ 8 ಲಕ್ಷ ರೂ. ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದ್ರಾಪುರ ಪೊಲೀಸ್ ವರಿಷ್ಠಾಧಿಕಾರಿ ಸುದರ್ಶನ್ ಮುಮಕ್ಕ ಅವರ ಪ್ರಕಾರ, ರೈತ 2021ರ ಏಪ್ರಿಲ್‌ನಲ್ಲಿ ಸಾಲ ಪಡೆದಿದ್ದು, ಮೂರು ವರ್ಷಗಳ ಕಾಲ ಕಂತುಗಳನ್ನು ಕಟ್ಟಿದರೂ ಬಡ್ಡಿಯನ್ನು ನಿರಂತರವಾಗಿ ಹೆಚ್ಚಿಸಲಾಗಿತ್ತು. ಕೊನೆಗೆ 2024ರ ಅಕ್ಟೋಬರ್‌ನಲ್ಲಿ ಕಿಡ್ನಿ ಮಾರಾಟಕ್ಕೆ ಒತ್ತಾಯಿಸಲಾಗಿದೆ.

ಈ ಪ್ರಕರಣ ಬಹಿರಂಗವಾದ ಬಳಿಕ ಪೊಲೀಸರು ತನಿಖೆ ಆರಂಭಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಿಶೋರ್ ಬವಾಂಕುಲೆ, ಮನೀಶ್ ಘಟ್‌ಬಂಧೆ, ಲಕ್ಷ್ಮಣ್ ಉರ್ಕುಡೆ, ಪ್ರದೀಪ್ ಬವಾಂಕುಲೆ, ಸಂಜಯ್ ಬಲ್ಲಾರ್‌ಪುರೆ ಮತ್ತು ಸತ್ಯವಾನ್ ಬೋರ್ಕರ್ ವಿರುದ್ಧ ಸುಲಿಗೆ ಆರೋಪ ಹಾಗೂ ಮಹಾರಾಷ್ಟ್ರ ಹಣ ಸಾಲ (ನಿಯಂತ್ರಣ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Join WhatsApp

Join Now

RELATED POSTS

1 thought on “ಸಾಲದ ಒತ್ತಡಕ್ಕೆ ಕಿಡ್ನಿಯನ್ನೇ ಮಾರಿದ ರೈತ: ಅಕ್ರಮ ಬಡ್ಡಿ ದಂಧೆ ”

Comments are closed.