ಧಾರವಾಡ/ಬೆಳಗಾವಿ (ಡಿ.16): ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿ ಬೆಳಗಾವಿ ಕೃಷಿ ಇಲಾಖೆಯ ವಿಜಿಲೆನ್ಸ್ ಉಪ ನಿರ್ದೇಶಕ ರಾಜಶೇಖರ ಬಿಜಾಪುರ ಅವರ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದು, ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ, ಭಾರೀ ಪ್ರಮಾಣದ ಚಿನ್ನಾಭರಣಗಳು ಹಾಗೂ ಹಣಕಾಸು ದಾಖಲೆಗಳು ಪತ್ತೆಯಾಗಿವೆ.
ದಾಳಿ ವೇಳೆ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸುಮಾರು ₹50,000 ನಗದು ಹಣವನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ಫ್ಲಶ್ ಮಾಡಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.
ನಾಲ್ಕು ಜಿಲ್ಲೆಗಳಲ್ಲಿ ಏಕಕಾಲ ದಾಳಿ
ಸದ್ಯ ಬೆಳಗಾವಿ ಕೃಷಿ ಇಲಾಖೆಯಲ್ಲಿ ವಿಜಿಲೆನ್ಸ್ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಈ ಹಿಂದೆ ಧಾರವಾಡ ಕೃಷಿ ಇಲಾಖೆಯ ಉಪ ನಿರ್ದೇಶಕರಾಗಿದ್ದ ರಾಜಶೇಖರ ಬಿಜಾಪುರ ಅವರ ಅಕ್ರಮ ಆಸ್ತಿ ಗಳಿಕೆ ಕುರಿತು ಮಾಹಿತಿ ಪಡೆದ ಲೋಕಾಯುಕ್ತ ಎಸ್‌ಪಿ ಸಿದ್ಧಲಿಂಗಪ್ಪ ಅವರ ನೇತೃತ್ವದ ತಂಡ, ಬೆಳಗಾವಿ, ಧಾರವಾಡ (ಕೆಳಗೇರಿ ಮತ್ತು ಸನ್ಮತಿ ನಗರ), ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿರುವ ಅವರ ನಿವಾಸಗಳು ಮತ್ತು ಆಸ್ತಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿತು.
ಹಣ ಫ್ಲಶ್ ಮಾಡಿ ಸಾಕ್ಷ್ಯ ನಾಶಕ್ಕೆ ವಿಫಲ ಯತ್ನ
ಧಾರವಾಡದ ನಿವಾಸದಲ್ಲಿ ದಾಳಿ ವೇಳೆ ರಾಜಶೇಖರ ಬಿಜಾಪುರ ಅವರು ಅಧಿಕಾರಿಗಳನ್ನು ಸುಮಾರು ಅರ್ಧ ಗಂಟೆಗಳ ಕಾಲ ಮನೆಯ ಹೊರಗೆ ಕಾಯಿಸಿದರೆಂದು ತಿಳಿದುಬಂದಿದೆ. ಈ ಅವಧಿಯಲ್ಲಿ ₹50,000 ನಗದು ಹಣವನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ಫ್ಲಶ್ ಮಾಡುವ ಮೂಲಕ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಕೇವಲ ₹50,000 ಮಾತ್ರ ಫ್ಲಶ್ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದರೂ, ಹೆಚ್ಚಿನ ಹಣ ನಾಶವಾಗಿರುವ ಸಾಧ್ಯತೆ ಇದೆ ಎಂದು ಲೋಕಾಯುಕ್ತ ಪೊಲೀಸರು ಶಂಕಿಸಿದ್ದು, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕೋಟ್ಯಂತರ ರೂ. ಅಕ್ರಮ ಆಸ್ತಿ ಪತ್ತೆ
ಲೋಕಾಯುಕ್ತ ತನಿಖೆಯಲ್ಲಿ ಸುಮಾರು 300 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನೇಕ ಬ್ಯಾಂಕ್ ಪಾಸ್‌ಬುಕ್‌ಗಳು ದೊರೆತಿದ್ದು, ವಿವಿಧ ಖಾತೆಗಳ ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ.
ಇದಲ್ಲದೆ, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿರುವ ವಾಟರ್ ಸ್ಪೋರ್ಟ್ಸ್ ಯೋಜನೆಯಲ್ಲಿ ರಾಜಶೇಖರ ಅವರು ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್ ಹಾಗೂ ಧಾರವಾಡದ ಸನ್ಮತಿ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್ ಯೋಜನೆಯಲ್ಲಿಯೂ ಭಾರೀ ಮೊತ್ತದ ಹಣ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.






