ದೆಹಲಿ (ಡಿ.26):
ಡಿಜಿಟಲ್ ಯುಗದಲ್ಲಿ ಲ್ಯಾಪ್‌ಟಾಪ್ ಬಳಕೆ ಸಾಮಾನ್ಯವಾಗಿರುವ ಈ ದಿನಗಳಲ್ಲಿ, ಬ್ಯಾಟರಿ ಸ್ಫೋಟದಿಂದ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ಲ್ಯಾಪ್‌ಟಾಪ್ ಸರ್ವೀಸ್ ಮಾಡುವ ವೇಳೆ ಬ್ಯಾಟರಿಯಲ್ಲಿ ಉಂಟಾದ ಬೆಂಕಿ ಅವಘಡದಿಂದ 20 ವರ್ಷದ ಜುನೈದ್ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಸಹೋದರ ಸಮೀರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ದೆಹಲಿಯ ಮುಸ್ತಾಫಾಬಾದ್ ಪ್ರದೇಶದಲ್ಲಿ ಜುನೈದ್ ಮತ್ತು ಸಮೀರ್ ಸಹೋದರರು ಲ್ಯಾಪ್‌ಟಾಪ್ ಸರ್ವೀಸ್ ಸೆಂಟರ್ ನಡೆಸುತ್ತಿದ್ದರು. ಗ್ರಾಹಕರೊಬ್ಬರು ಬ್ಯಾಟರಿ ಬೇಗ ಬಿಸಿಯಾಗುತ್ತಿದೆ ಹಾಗೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರಿನೊಂದಿಗೆ ಲ್ಯಾಪ್‌ಟಾಪ್ ಅನ್ನು ರಿಪೇರಿಗೆ ನೀಡಿದ್ದರು. ಈ ವೇಳೆ ಬ್ಯಾಟರಿಯನ್ನು ಸರ್ವೀಸ್ ಮಾಡುವಾಗ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.
ನಾಲ್ಕು ಮಹಡಿಯ ಕಟ್ಟಡದ ಕೆಳ ಮಹಡಿಯಲ್ಲಿದ್ದ ಸರ್ವೀಸ್ ಸೆಂಟರ್‌ನಲ್ಲಿ ಬೆಂಕಿ ವೇಗವಾಗಿ ಹರಡಿದ್ದು, ಒಳಗಿದ್ದ ಇತರ ಲ್ಯಾಪ್‌ಟಾಪ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಿಗೂ ಬೆಂಕಿ ತಗುಲಿದೆ. ತೀವ್ರ ಗಾಯಗಳ ಕಾರಣ ಇಬ್ಬರೂ ಸಹೋದರರು ತಕ್ಷಣ ಹೊರಬರಲು ಸಾಧ್ಯವಾಗಿಲ್ಲ.
ಘಟನೆಯ ಮಾಹಿತಿ ಪಡೆದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರು. ಆದರೆ ಜುನೈದ್ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಗಾಯಗೊಂಡಿರುವ ಸಮೀರ್‌ಗೆ ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಿಎನ್‌ಎಸ್ ಕಾಯ್ದೆಯ 106(1), 287 ಹಾಗೂ 324(4) ಕಲಂಗಳ ಅಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.
ಲ್ಯಾಪ್‌ಟಾಪ್ ಬ್ಯಾಟರಿ ಸ್ಫೋಟಗಳು ವಿರಳವಾದರೂ, ಬ್ಯಾಟರಿಯಲ್ಲಿ ಬಿಸಿಯಾಗುವಿಕೆ ಅಥವಾ ತಾಂತ್ರಿಕ ದೋಷ ಕಂಡುಬಂದರೆ ತಕ್ಷಣವೇ ಬದಲಾವಣೆ ಅಥವಾ ತಜ್ಞರಿಂದ ಸರ್ವೀಸ್ ಮಾಡಿಸಬೇಕು ಎಂದು ತಾಂತ್ರಿಕ ತಜ್ಞರು ಸಲಹೆ ನೀಡಿದ್ದಾರೆ. ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಕಾಣಿಸಿಕೊಳ್ಳುವ ದೋಷಗಳನ್ನು ನಿರ್ಲಕ್ಷ್ಯ ಮಾಡದೆ ಸರಿಪಡಿಸಿಕೊಂಡು ಬಳಸುವುದು ಸುರಕ್ಷಿತವೆಂದು ತಿಳಿಸಿದ್ದಾರೆ.






